ಸೋಮವಾರ, ಸೆಪ್ಟೆಂಬರ್ 5, 2011

ರೆಡ್ಡಿಯ ಸಹವಾಸ ದೇವೇಗೌಡ ದೂರಾಲೋಚನೆ



ದೇವೇಗೌಡರೇ ಹೀಗೆ ಯಾವತ್ತೂ ಮುಂದಿನ ಪರಿಣಾಮಗಳನ್ನು ಗುರುತಿಸಿಯೇ ಹೆಜ್ಜೆಯನ್ನಿಡುವವರು ಎಂಬುದು ಈಗ ಮತ್ತೂಮ್ಮೆ ಸಾಬೀತಾಗಿ


Udayavani | Sep 05, 2011
ಬೆಂಗಳೂರು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರೇ ಹೀಗೆ ಯಾವತ್ತೂ ಮುಂದಿನ ಪರಿಣಾಮಗಳನ್ನು ಗುರುತಿಸಿಯೇ ಹೆಜ್ಜೆಯನ್ನಿಡುವವರು ಎಂಬುದು ಈಗ ಮತ್ತೂಮ್ಮೆ ಸಾಬೀತಾಗಿದೆ.

ಇದೀಗ ಸಿಬಿಐ ವಶದಲ್ಲಿರುವ ರೆಡ್ಡಿಯ ಸಹವಾಸಕ್ಕೆ ಮುಂದಾಗಿದ್ದ ತಮ್ಮ ಪುತ್ರ ಎಚ್‌.ಡಿ. ಕುಮಾರಸ್ವಾಮಿಯನ್ನು ದೇವೇಗೌಡರು ತಡೆದಿದ್ದರ ಹಿಂದೆ ಅವರ ಎಂದಿನ ದೂರಾಲೋಚನೆ ಕೆಲಸ ಮಾಡಿತ್ತು. ರೆಡ್ಡಿಗಳ ಜತೆ ಸೇರಿದರೆ ಪಕ್ಷದ ಮತ್ತು ವೈಯಕ್ತಿಕವಾಗಿ ತಮ್ಮ ಕುಟುಂಬದ ಮಾನ ಮರ್ಯಾದೆ ಎಲ್ಲಿಗೆ ಬಂದು ಮುಟ್ಟುತ್ತದೆ ಎಂಬುದು ಅವರಿಗೆ ಗೊತ್ತಿತ್ತು.

ರೆಡ್ಡಿ ಬಳಗದ ಹರಕೆಯ ಕುರಿಯಾಗಿರುವ ಬಿ. ಶ್ರೀರಾಮುಲು ಮೂಲಕ ರೆಡ್ಡಿ ಸಹೋದರರ ಹತ್ತಿರಕ್ಕೆ ಹೋಗಲು ಕುಮಾರಸ್ವಾಮಿ ಕಾರ್ಯತಂತ್ರ ರೂಪಿಸಿಕೊಂಡಿದ್ದರು. ರೆಡ್ಡಿಗಳ ಪರಮಾಪ್ತ ಆಂಧ್ರಪ್ರದೇಶದ ವೈಎಸ್‌ಆರ್‌ ಕಾಂಗ್ರೆಸ್‌ನ ಸಂಸದ ಜಗನ್‌ ಮೋಹನ್‌ ರೆಡ್ಡಿ ಅವರನ್ನು ಸಹ ಕುಮಾರಸ್ವಾಮಿ ಇತ್ತೀಚಿಗೆ ಬೆಂಗಳೂರು ಹೊರವಲಯದ ತೋಟದ ಮನೆಯಲ್ಲಿ ಭೇಟಿ ಮಾಡಿ ಚರ್ಚಿಸಿದ್ದರು. ಆದರೆ ಕುಮಾರಸ್ವಾಮಿ ಈ ಭೇಟಿಯನ್ನು ನಿರಾಕರಿಸಿದ್ದರು.

ಬಿಜೆಪಿಯನ್ನು ಮುರಿಯಬೇಕೆಂಬ ಏಕೈಕ ಉದ್ದೇಶದಿಂದಲೇ ಕುಮಾರಸ್ವಾಮಿ ರೆಡ್ಡಿಗಳ ಸಹವಾಸಕ್ಕೆ ಮುಂದಾಗಿದ್ದರು. ಆದರೆ ಕುಮಾರಸ್ವಾಮಿಯ ಈ ವರ್ತನೆ ದೇವೇಗೌಡರಿಗೆ ಸುತಾರಂ ಇಷ್ಟವಿರಲಿಲ್ಲ. ಆದ್ದರಿಂದಲೇ ಅವರು ಬಿ. ಶ್ರೀರಾಮುಲು ಪಕ್ಷ ಸೇರ್ಪಡೆಗೂ ವಿರೋಧ ವ್ಯಕ್ತಪಡಿಸಿದ್ದರು.

ಯಾವುದೇ ಹೆಜ್ಜೆಯನ್ನಿಟ್ಟರು ಅದರಿಂದ ಎದುರಾಗುವ ಸಾಧಕ-ಬಾಧಕಗಳು, ತೊಂದರೆಯಾದರೆ ಮುಂದೆ ಕೈಗೊಳ್ಳಬೇಕಾದ ಕ್ರಮಗಳೇನು ಎಂಬುದನ್ನು ಮೊದಲೇ ಆಲೋಚನೆ ಮಾಡಿ ಇಡುವ ಅಪರೂಪದ ರಾಜಕಾರಣಿ ದೇವೇಗೌಡ. ಈ ಪ್ರಕರಣದಲ್ಲಿಯೂ ದೇವೇಗೌಡರು ಇದೇ ರೀತಿಯಲ್ಲಿ ವರ್ತಿಸಿದ್ದರು. ಶ್ರೀರಾಮುಲು ಪರಿಶಿಷ್ಟ ಪಂಗಡದ ನಾಯಕನಾಗಿದ್ದು, ಆತನನ್ನು ರೆಡ್ಡಿಗಳು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬ ಅಭಿಪ್ರಾಯ ಗೌಡರಲ್ಲಿದೆ. ಆದರೆ ಆತ ಸೇರಿದಂತೆ ರೆಡ್ಡಿ ಬಳಗದ ಯಾವೊಬ್ಬ ನಾಯಕನನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಸುತಾರಾಂ ಸಿದ್ಧರಿರಲಿಲ್ಲ. ಬ್ಲಾಕ್‌ ಮೇಲ್‌ ಮಾಡುವವರನ್ನು ಬಗಲಿನಲ್ಲಿ ಕಟ್ಟಿಕೊಂಡಂತೆ ಎಂದೇ ಹೇಳಿದ್ದರು.

ಅಕ್ರಮ ಗಣಿಗಾರಿಕೆ ವಿಷಯವನ್ನು ಆಂಧ್ರಪ್ರದೇಶ ಸರ್ಕಾರ 2009ರಲ್ಲಿಯೇ ಸಿಬಿಐಗೆ ವಹಿಸಿದ್ದರಿಂದ ಇಂದಲ್ಲ ನಾಳೆ ರೆಡ್ಡಿಗಳು ಬಂಧನಕ್ಕೆ ಒಳಗಾಗುತ್ತಾರೆ ಎಂಬುದು ಗೌಡರಿಗೆ ತಿಳಿದಿತ್ತು. ಆದ್ದರಿಂದಲೇ ಆದಷ್ಟು ತಮ್ಮ ಪುತ್ರನನ್ನು ಈ ವಿಷಯದಲ್ಲಿ ಹೆಚ್ಚು ಮುಂದುವರೆಯದಂತೆ ತಡೆದರೆಂದು ಪಕ್ಷದ ಮೂಲಗಳು ಸ್ಪಷ್ಟಪಡಿಸುತ್ತವೆ.

ಆದ್ದರಿಂದಲೇ ಕುಮಾರಸ್ವಾಮಿ ಮೊದಲಿಗೆ ಶ್ರೀರಾಮುಲು ರಾಜೀನಾಮೆ ನೀಡಿದಾಗ ಅವರ ಪರವಾಗಿ ಹೇಳಿಕೆ ನೀಡಿದ್ದರಾದರೂ, ಈಗ ತಾವು ರೆಡ್ಡಿಗಳ ಸಹವಾಸಕ್ಕೆ ಹೋಗುವ ಪ್ರಯತ್ನ ಮಾಡಿದ್ದಾಗಿ ಬರುತ್ತಿರುವ ಸುದ್ದಿಗಳೆಲ್ಲ ಕೇವಲ ವದಂತಿಗಳೆಂದು ಅಲ್ಲಗಳೆಯುತ್ತಿದ್ದಾರೆ.

ದೇವೇಗೌಡರು ರೆಡ್ಡಿಗಳನ್ನು ಬಲವಾಗಿ ವಿರೋಧಿಸಲು ಕಾರಣಗಳು ಇದ್ದೇ ಇವೆ. ಮೊದಲನೇಯದು 150 ಕೋಟಿ ರೂ.ಗಳ ಗಣಿಕಪ್ಪದ ಆರೋಪವಾದರೆ, ದೇವೇಗೌಡರನ್ನು ವೈಯಕ್ತಿಕವಾಗಿ ರೆಡ್ಡಿಗಳು ಕೆಣಕಿದ್ದು ಮತ್ತೂಂದು ಕಾರಣವಾಗಿದೆ. ಗೌಡರ ಕುಟುಂಬದ ಸದಸ್ಯರ ವಿರುದ್ಧ ರೆಡ್ಡಿ ಟೀಕಾರೋಪವನ್ನು ಮಾಡಿದ್ದರು.

ಇದೆಲ್ಲದರಿಂದ ಕೆಂಡಾಮಂಡಲರಾಗಿದ್ದ ದೇವೇಗೌಡರು ಸಹ ರೆಡ್ಡಿಗಳ ಅಕ್ರಮ ಗಣಿಗಾರಿಕೆಯ ಕುರಿತು ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದರು. ರೆಡ್ಡಿಗಳ ಗಣಿ ಕಂಪೆನಿಯ ನೌಕರ ಆಂಜನೇಯಲುವನ್ನು ಹೊರ ಹಾಕಿದಾಗ ಆತನ ಕುಟುಂಬಕ್ಕೆ ಸಾಕಷ್ಟು ನೆರವಾಗುವ ಮೂಲಕ ಮಾಹಿತಿ ಸಂಗ್ರಹಣೆಗೆ ಬಳಸಿಕೊಂಡಿದ್ದರು. ರೆಡ್ಡಿಗಳ ಬಗ್ಗೆ ಸದಾ ಕುದಿಯುತ್ತಲೇ ಇದ್ದ ಗೌಡರು. ಆದ್ದರಿಂದಲೇ ರೆಡ್ಡಿ ಪಾಳಯದ ಯಾರೊಬ್ಬರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಒಪ್ಪಲಿಲ್ಲ. ತಮ್ಮ ಪುತ್ರನಿಗೂ ಬುದ್ದಿ ಹೇಳಿ ರೆಡ್ಡಿ ಮತ್ತು ಶ್ರೀರಾಮುಲು ಸಹವಾಸ ಬೇಡವೆಂದು ನಿಲ್ಲಿಸಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ