ಶುಕ್ರವಾರ, ನವೆಂಬರ್ 11, 2011

ಬದುಕಿನ ದಾರಿ - 1



ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು ಮತ್ತು ಹೇಗೆ ಬದುಕಬೇಕು ಅಂತ ನಮ್ಮ ತಂದೆ ಯಾವತ್ತು ಹೇಳಿಕೊಡಲಿಲ್ಲ, ನಾವು ಈ ಭೂಮಿ ಮೇಲೆ ಹುಟ್ಟಿದೀವಿ, ಯಾರ ಸಹಾಯ ಇಲ್ಲದೆ, ಯಾರೊಬ್ಬರಿಗೆ ತೊಂದರೆ ಕೊಡದೆ ಬದುಕಬೇಕು, ಎಂದು ದುಡಿದ  ಅವರ ಬದುಕೆ ಇಂದು ನಮಗೆ ಮಾರ್ಗದರ್ಶಿ ಯಾಗಿದೆ. ನಮ್ಮ ತಂದೆ ಅಷ್ಟೊಂದು ವಿದ್ಯಾವಂತರಲ್ಲ, ಸ್ವಲ್ಪ ಮಟ್ಟಿಗೆ ಓದಿದವರು. ನಮ್ಮ ಕುಟುಂಬವನ್ನು ಸಾಕಲು ಅವರು ಮಾಡಿದ ಕೆಲಸಗಳು ಒಂದಲ್ಲ, ಹಲವಾರು. ಬೆಂಗಳೂರಿನ ಅವೆನ್ಯು ರಸ್ತೆ ಯಲ್ಲಿ ಬೀದಿ ಬದಿಯಲ್ಲಿ ಪುಸ್ತಕಗಳನ್ನು ಮಾರಿದರು, ಬಳೇಪೇಟೆ,ಚಿಕ್ಕಪೇಟೆ, ಅವೆನ್ಯು ರಸ್ತೆ ಮುಂತಾದ ಕಡೆ ಬಜ್ಜಿ ಬೋಂಡ ಗಳನ್ನು ಮಾರಿದರು, ಚಿಕ್ಕವಯಸ್ಸಿನಲ್ಲಿ ಕೆಲ ಚಿತ್ರಗಳಲ್ಲಿ ಸಹಾಯಕ ನಟ ರಾಗಿ ಕೆಲಸ ಮಾಡಿದರು, ಒಂದು ಸ್ವಲ್ಪ ದಿನ ಮದ್ರಾಸ್ ನಲ್ಲಿ ಸಹ ಹೋಗಿ ಕೆಲಸ ಮಾಡಿ ಬಂದರು. ಮೂರು ಹೆಣ್ಣು ಮಕ್ಕಳು, ನಮ್ಮ ಅಜ್ಜಿ, ನಮ್ಮ ತಾಯಿ, ತಮ್ಮ ಮತ್ತು ನನ್ನನ್ನು ಸಾಕಲು ಮಾಡಿದ ಕೆಲಸಗಳು ಒಂದಲ್ಲ. ಅದೆಲ್ಲ ನೆನಪಿಸಿಕೊಂಡರೆ ಬಹಳ ಬೇಸರ ವಾಗುತ್ತೆ.
ನನಗಂತೂ ಪ್ರತಿಬಾರಿ ರೇಶನ್ ತರುವಾಗ ರೇಶನ್ ಅಂಗಡಿಯವನ ಜತೆ ಜಗಳ, ಸಾಮನುಗಳು ಇದ್ದರೂ ಇಲ್ಲ ಅಂತ ಹೇಳಿ, ಅವನ ಸ್ನೇಹಿತರಿಗೆ ಹಾಗು ಬೇಕಾದವರಿಗೆ ಮೊದಲು ಕೊಟ್ಟು ಉಳಿದದ್ದನ್ನು ಹೆಚ್ಚಿನ ಬೆಲೆಗೆ ಬ್ಲಾಕ್ ನಲ್ಲಿ ಮಾರಿಕೊಳ್ಳುತ್ತಿದ್ದ. ಅವನ ಜತೆ ಈ ತರಹ ಆದರೆ, ಇನ್ನು ದಿನಸಿ ಅಂಗಡಿಯಲ್ಲಿ ಸಾಲ ಕೇಳಿ ತರಬೇಕಾದರೆ ಬಹಳ ಹಿಂಸೆ ಆಗುತಿತ್ತು.
ಮುಂದಿನ ಭಾಗದಲ್ಲಿ ಕೆಲ ಹೇಳಿಕೊಳ್ಳಲೇ ಬೇಕಾದ ಕಥೆಗಳಿವೆ, ಅವನ್ನು ಒಂದೊಂದಾಗಿ ಬರೀತಾ ಹೋಗ್ತೀನಿ.

ಇನ್ನು ಬಡವರಿಗೆ ಸರ್ಕಾರ ಅದನ್ನು ಮಾಡಿಲ್ಲ, ಇದನ್ನು ಮಾಡಿಲ್ಲ ಅಂತ ಪತ್ರಿಕೆಗಳಲ್ಲಿ ಓದುತ್ತಾಯಿರ್ತೇವೆ, ಟೀವಿಗಳಲ್ಲಿ ನಾವು ಯಾವಗಲು ನೋಡ್ತಾಯಿರ್ತೇವೆ. ಚಿಂತಾಂಜನಕ ದ ಬದುಕು, ಕಣ್ಮುಚ್ಚಿ ಕುಳಿತ ಸರಕಾರ,  ಒಂದು ಒಳ್ಳೆ ಕವರ್ ಸ್ಟೋರಿ ಮಾಡಿ ಅಥವ ಬರೆದು ಬೆನ್ನು ತಟ್ಟಿಸಿಕೊಳ್ಳುವ ಜನ. ಒಂದು ವರದಿ ಮಾಡಿ  ಇವರು ಕಣ್ಮುಚ್ಚಿ ಕುಳಿತುಕೊಳ್ಳೋದನ್ನ ನಾವು ನೋಡ್ತೀವಿ. ಅಷ್ಟರಲ್ಲೇ ಬೇರೆ ಎಲ್ಲೋ ಗಮನ ಹರಿದಿರುತ್ತೆ, ಈ ವರದಿ ಬಗ್ಗೆ ಮತ್ತೆ ಮರೆವು. ಆದರೆ ಸರ್ಕಾರ ವನ್ನು ಧೂಷಿಸುವದರ ಬದಲು ಅವರಿಗೊಂದು ಪರ್ಯಾಯ ವ್ಯವಸ್ಥೆ ಯನ್ನು ಯಾವುದಾದರು ಒಂದು ಸಮಾಜ ಸೇವೆ ಸಂಘ ಸಂಸ್ಥೆ ಯ ಮೂಲಕ ಮಾಡ ಬಹುದಲ್ವ?
ಹಾಗೆ ನೋಡಿದರೆ, ಸ್ವಾತಂತ್ರ್ಯ ಬಂದಾಗ ದೇಶದ ಜನಸಂಖ್ಯೆ ಸುಮಾರು ೪೭ ಕೋಟಿ ಇತ್ತು, ಇಂದು ಆಸು ಪಾಸು ೧೨೦ ಕೋಟಿ ಹತ್ತಿರ ಇದೆ. ೨ ದಶಕಗಳ ಹಿಂದೆ ನಮ್ಮ ರಾಜಕೀಯ ಮುಖಂಡರು ಭಾಷಣ ಮಾಡ್ತ ಇರಬೇಕಾದರೆ, ಮುಕ್ಕೋಟಿ ಕನ್ನಡಿಗರು ಅಂತ ಹೇಳ್ತಾಯಿದ್ದರು, ಇಂದು ಆ ಸಂಖ್ಯೆ ೬ ಕೋಟಿ ಆಗಿದೆ. ಹಾಗೆ ಸಮಸ್ಯೆಗಳು ಸಹ ದುಪ್ಪಟ್ಟಾಗಿವೆ, ಎಲ್ಲವನ್ನು ಸರ್ಕಾರ ನಿಭಾಯಿಸಲಿಕ್ಕೆ ಆಗುತ್ತದೆಯೆ? ದೇಶದ ಪ್ರಜೆಗಳಾಗಿ ಕೆಲ ಜವಬ್ದಾರಿಗಳನ್ನು ನಾವು ಸಹ ಹೊತ್ತು ಕೊಳ್ಳ ಬೇಕಲ್ಲವೆ? ನಮ್ಮ ನಮ್ಮ ಬದುಕನ್ನು ಕಟ್ಟಿಕೊಳ್ಳಲು ನಾವು ಸರಕಾರ ವನ್ನು ಯಾಕೆ ಅವಲಂಬಿಸಬೇಕು? ಶಿಕ್ಷಣ, ವೈದ್ಯಕೀಯ ಸೌಲಭ್ಯ, ರಸ್ತೆ, ನೀರು, ಸಾರಿಗೆ ಸೌಲಭ್ಯ, ವಿದ್ಯುತ್ ಇನ್ನು ಮುಂತಾದ ಸಮಸ್ಯೆಗಳ ಬಗ್ಗೆ ಖಂಡಿತ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕು ಅದು ಸರ್ಕಾರದ ಪ್ರಥಮ ಕರ್ತವ್ಯ.
ಇನ್ನು ಕೆಲವರು ದೇವರು, ಧರ್ಮ ವನ್ನು ದೂಷಣೆ ಮಾಡೋದು ಇತ್ತೀಚಿಗೆ ಫ್ಯಾಶನ್ ಆಗಿದೆ, ಯಾವುದೇ ಧರ್ಮ ಹಾಗು ದೇವರು ನೀನು ಸುಮ್ಮನೆ ನನ್ನ ಧ್ಯಾನ, ನನ್ನ ಪೂಜೆ ಮಾಡ್ತ ಯಿದ್ದರೆ ನಿನ್ನ ಹೊಟ್ಟೆ ತುಂಬಿಸುತ್ತೇನೆ ಎಂದು ಹೇಳಿಲ್ಲ. ಕೆಲ ಯುವಜನತೆ ಧರ್ಮ, ದೇವರನ್ನು ಅರ್ಥ ಮಾಡಿಕೊಳ್ಳದೆ ಎಡಬಿಡಂಗಿಗಳ ಉಪದೇಶಕ್ಕೆ ಮರುಳಾಗಿ ಭಾರತೀಯ ಸಂಸ್ಕೃತಿಯನ್ನು ಹೀಗೆಳೆಯುವುದರಲ್ಲಿ ಮಗ್ನರಾಗಿದ್ದಾರೆ.
ಸ್ನೇಹಿತರು ಚರ್ಚಿಸಿದಂತೆ, ದೇವಸ್ಥಾನಗಳ ಅಗತ್ಯ ದೇವರಿಗಿಲ್ಲ. ಇದ್ದಿದ್ದರೆ ಅಸಂಖ್ಯ ದೇವಸ್ಥಾನಗಳು ಲೂಟಿಕೋರರ ಕೈನಲ್ಲಿ ಪುಡಿಪುಡಿಯಾಗುತ್ತಿರಲಿಲ್ಲ. ದೇವರಿಗೆ ಅವಶ್ಯಕತೆ ಇಲ್ಲ ಮನುಷ್ಯರಿಗೆ"ಅಂತ! ದೇವಸ್ಥಾನಗಳು ಪ್ರಾರ್ಥನೆಗೆ ಒಂದು ಜಾಗ ಮಾತ್ರ ಅದಷ್ಟಕ್ಕೆ ಸೀಮಿತ ಅದನ್ನು ಬಿಟ್ಟು ದೇವರು ಕೇವಲ ಅಲ್ಲಿಯೇ ಇದ್ದಾನೆ ಎನ್ನುವುದು ನಮ್ಮಕಲ್ಪನೆ ಅಷ್ಟೇ.
ನಮ್ಮ ನಮ್ಮ ಬದುಕನ್ನು ರೂಪಿಸಿಕೊಳ್ಳುವುದಕ್ಕೂ ಈ ಸರಕಾರ ಗಳು, ಧರ್ಮಗಳು, ಜಾತಿಗಳು ಏನು ಮಾಡಬೇಕಾಗಿದೆ. ಅವಕಾಶವನ್ನು ನಾವು ಹುಡುಕಿಕೊಂಡು ಹೋಗಬೇಕು, ಅವಕಾಶಗಳಿಗೆ ತಕ್ಕಂತ ವಿಧ್ಯಾಭ್ಯಾಸ, ಬುದ್ಧಿ ಶಕ್ತಿ, ಚಾತುರ್ಯತೆ, ಪ್ರೌಡಿಮೆ ಯನ್ನು ನಾವು ರೂಪಿಸಿ ಕೊಳ್ಳ ಬೇಕು. ನಮ್ಮ ಶಕ್ತಾನುಸಾರವಾಗಿ ನಮಗೆ ಇಷ್ಟವಾದಂತಹ ಕೆಲಸ ಗಳನ್ನು ಮಾಡಿ ಅದರಲ್ಲಿ ಉನ್ನತಿಯನ್ನು ಸಾಧಿಸಿ ತೋರಿಸಬೇಕು.
ಅಸಂಖ್ಯಾತ ಭಾರತೀಯರು ಅಂದು ಇಂದು ವಿದೇಶಗಳಲ್ಲಿ ಕೆಲಸವನ್ನು ಹುಡುಕಿಕೊಂಡು ಹೋಗಿದ್ದಾರೆ ಹಾಗು ಹೋಗುತಿದ್ದಾರೆ, ಅದರಲ್ಲಿ ಸಫಲರಾಗಿ ಇಂದು ಲಕ್ಷಾಂತರ ಹಣವನ್ನು ಗಳಿಸಿ ಸುಖವಾಗಿದ್ದಾರೆ. ಇತ್ತೀಚಿಗೆ ಗಲ್ಫ್ ನಲ್ಲಿರುವ ಸ್ನೇಹಿತರ ಜತೆ ಚರ್ಚಿಸುವಾಗ ಬಾಂಗ್ಲಾದೇಶಿಯರ ವಿಚಾರ ಪ್ರಸ್ತಾಪ ವಾಯಿತು. ಶೇ೯೦ ಮುಸ್ಲಿಮರಿರುವ ಬಾಂಗ್ಲದೇಶದ ಜನರಲ್ಲಿ ಬಹುತೇಕ ಜನರು ವಲಸೆ ಹೋಗುತಿದ್ದಾರೆ. ಎರಡೊತ್ತಿನ ಊಟ ಮತ್ತು ಅವರನ್ನು ನಂಬಿಕೊಂಡ ಜನರನ್ನು ಸಾಕುವುದಕ್ಕಾಗಿ ಗಲ್ಫ್ ರಾಷ್ಟ್ರಗಳಲ್ಲಿ ಅವರು ಮಾಡದ ಕೆಲಸಗಳಿಲ್ಲ, ರಸ್ತೆ ಕಸ ಗುಡಿಸುವುದರಿಂದ ಹಿಡಿದು ಕಟ್ಟಡ ಕಟ್ಟುವವರೆಗೆ ಎಲ್ಲ ರೀತಿಯ ಕೆಲಸ ಗಳಲ್ಲಿ ಯಾವುದೇ ಚೌಕಟ್ಟು ಗಳನ್ನು ಹಾಕಿ ಕೊಳ್ಳದೆ ದುಡಿಯುತಿದ್ದಾರೆ. ಇನ್ನು ಐರೋಪ್ಯ ರಾಷ್ಟ್ರಗಳಲ್ಲಿ, ಇಂತಹ ಬಹುತೇಕ ಕೆಲಸವನ್ನು ಆ ಬಿಳಿಯರೇ ಮಾಡುತ್ತಾರೆ. ಹೀಗೆ ಎಲ್ಲರೂ ತಮ್ಮ ತಮ್ಮ ಹೊಟ್ಟೆ ಹೊರೆಯಲು ತಮಗೆ ಅವಕಾಶದೊರೆತ ಎಲ್ಲ ಕೆಲಸಗಳನ್ನು ಮಾಡುತ್ತಾರೆ, ಆದರೆ ನಮ್ಮ ರಾಷ್ಟ್ರದಲ್ಲಿ ..............

ಮುಂದುವರಿಯುವುದು
ಚಿತ್ರ ಕೃಪೆ: ಅಂತರ್ಜಾಲ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ