ಶುಕ್ರವಾರ, ಜುಲೈ 29, 2011

ತಣ್ಣಗಾದ ವಿವಾದ


ಸಿಂಗಮ್ ಚಿತ್ರದ ಸಂಭಾಷಣೆ ಯ ವಿವಾದ ಈಗ ಮುಗಿಯುವ ಹಂತಕ್ಕೆ ಬಂದಿದೆ ಅಂತ ಕಾಣಿಸ್ತಾ ಯಿದೆ. ಆ ಸಂಭಾಷಣೆ ಯನ್ನು ಮ್ಯೂಟ್ ಮಾಡಿ ಅಥವ ಕತ್ತರಿ ಪ್ರಯೋಗ ಮಾಡಿ ಪ್ರದರ್ಶನ ಮಾಡುತ್ತೇವೆ ಎಂದು ಚಿತ್ರ ವಿತರಕರು ಹಾಗು ನಿರ್ಮಾಪಕರು  ಭರವಸೆ ಕೊಟ್ಟಿದ್ದಾರೆ. ಸ್ಯಾಟಲೈಟ್ ನಿಂದ ನೇರ ಚಿತ್ರ ಪ್ರದರ್ಶನ ವಾಗುತ್ತಿರುವ ಚಿತ್ರಮಂದಿರ ಗಳಲ್ಲಿ ಈಗಾಗಲೇ ಕತ್ತರಿ ಪ್ರಯೋಗ ನಡೆದಿದೆ ಹಾಗು ರೀಲ್ ಗಳಲ್ಲಿ ಈ ಬದಲಾವಣೆ ಯನ್ನು ಆದಷ್ಟು ಬೇಗ ಮಾಡುತ್ತೇವೆ ಎಂದಿದ್ದಾರೆ.
ಈಗ ಆಗಲೇ ಆಗಬೇಕಾಗಿರುವ ಡ್ಯಾಮೇಜ್ ಆಗಿಯಾಗಿದೆ. ಬಹು ಜನಕ್ಕೆ ಮಾಧ್ಯಮ ಗಳ ಮೂಲಕ ಈ ಸುದ್ದಿ ತಿಳಿದು ಹೊರ ರಾಜ್ಯದ ಜನರಲ್ಲಿ ಒಂದು ತರಹ ಕುತೂಹಲ ಉಂಟಾಗಿದ್ದು ಚಿತ್ರಕ್ಕೆ ಹೆಚ್ಚಿನ ಪ್ರಚಾರ ಲಭ್ಯವಾಗಿದೆ.
ಈಗ ಇರುವ ಪ್ರಶ್ನೆ ಯೆಂದರೆ, ಈ ಕತ್ತರಿ ಪ್ರಯೋಗ ಕೇವಲ ನಮ್ಮ ರಾಜ್ಯಕ್ಕೆ ಸೀಮಿತವೇ ಅಥವ ಹೊರರಾಜ್ಯದ ಎಲ್ಲ ಪ್ರಿಂಟ್ ಗಳಲ್ಲಿ ಈ ಕಾರ್ಯ ಮಾಡಲಾಗುತ್ತದೆಯೋ?  ಕತ್ತರಿ ಪ್ರಯೋಗ ಮಾಡಿದರೆ ಎಲ್ಲ ಪ್ರಿಂಟ್ ಗಳಲ್ಲಿ ಮಾಡಲೇ ಬೇಕು.
ಒಂದು ವೇಳೆ ಮ್ಯೂಟ್ ಮಾಡಿದರೆ, ಹೊರ ರಾಜ್ಯದ ಜನರಲ್ಲಿ ಇದನ್ನು ಯಾಕೆ ಮ್ಯೂಟ್ ಮಾಡಿದ್ದಾರೆ ಎನ್ನುವ ಕುತುಹಲ ವಿರುತ್ತೆ, ಹಾಗು ಅದರ ಬಗ್ಗೆ ಗಮನ ವಹಿಸಿದರೆ ಅದರ ವಿಷಯ ಗೊತ್ತಾಗುತ್ತೆ. "ಓಹೋ ಕನ್ನಡಿಗರನ್ನು ನಾಯಿಗಳು ಎಂದು ಬೈದಿದ್ದಾನ ಅಜಯ್ ದೇವಗನ್" ಎಂದು ಬಾಯಿಗೆ ಬಾಯಿಗೆ ಹರಡುತ್ತಾ ಹೋಗುತ್ತೆ. ಹೀಗೆ  ಇನ್ನಷ್ಟು ಡ್ಯಾಮೆಜ್ ಆಗ್ತಾ ಹೋಗುತ್ತೆ. ಇದನ್ನು ತಡೆಯಲು ಸಾಧ್ಯವಿಲ್ಲ.
ಮೊದಲೇ ಶಿವಸೇನೆ, ಎಮ್.ಎನ್.ಎಸ್ ಹಾಗು ಎಮ್.ಇ.ಎಸ್ ಪುಂಡರಿಗೆ ಬೆಳಗಾವಿಯಲ್ಲಿ ನಮ್ಮ ಕನ್ನಡಿಗರನ್ನು ಕೀಟಲೆ ಮಾಡಲು ಇಷ್ಟು ಸಾಕಲ್ವ.
೪ ವರ್ಷಗಳ ಹಿಂದೆ ತಮಿಳಿನಲ್ಲಿ ಅದೆಂತಹದ್ದೋ ಹಿಂಸೈ ಅರಸನ್ ೨೩ ಪುಲಿಕೇಶಿ ಎನ್ನುವ ಸಿನಿಮಾ ಬಂದಿತ್ತು. ಒಬ್ಬ ಹೇಡಿ ಪಾತ್ರ ಕ್ಕೆ  ವೀರ ಕನ್ನಡಿಗ ಪುಲಿಕೇಶಿ ಯ ಹೆಸರಿಟ್ಟು ಅಂದು ತಮಿಳರು ಅವಮಾನ ಮಾಡಿದ್ದರು, ನಮ್ಮ ಹೋರಾಟಗಾರರ ಫಲದಿಂದ ಆ ಚಿತ್ರ ಕರ್ನಾಟಕದಲ್ಲಿ ಬಿಡುಗಡೆ ಯಾಗಲಿಲ್ಲ ಆದರೆ, ಹೊರ ರಾಜ್ಯಗಳಲ್ಲಿ ಆ ಚಿತ್ರ ಅಪಾರ ಹಣ ಮಾಡಿತು, ಕರ್ನಾಟಕದಲ್ಲಿ ಅಂತಹ ನಷ್ಟ ವಾಗಲಿಲ್ಲ. ಇನ್ನು ತಮಿಳು ಹಾಗು ತೆಲುಗು ಚಾನೆಲ್ ಗಳಲ್ಲಿ ಈ ಚಿತ್ರ ಪ್ರಸಾರ ವಾಗುತ್ತಲೆ ಇದೆ. ಆದರೆ ಆ ಹೆಸರಿನಿಂದ ಘಾಸಿ ಯಾಗಿದ್ದು ನಮ್ಮ ಕನ್ನಡದ ಹೃದಯಗಳಿಗೆ, ಅವಮಾನ ವಾಗಿದ್ದು ನಮ್ಮ ಕನ್ನಡ ವೀರನಿಗೆ.
ಅವರ ಪ್ರಕಾರ ಇದೊಂದು ಕಾಲ್ಪನಿಕ ಕಥೆ, ಪುಲಿಕೇಶಿ ಯ ಹೆಸರನ್ನು ತಮಿಳರು ಉಪಯೋಗಿಸುವುದೇ ಇಲ್ಲ  ಅಂತಹ ಹೆಸರಿನ ವ್ಯಕ್ತಿಗಳು ಸಹ ಇಲ್ಲ  ಹಾಗಿದ್ದರೆ ಪುಲಿಕೇಶಿ ಯ ಹೆಸರು ಯಾಕೆ ಬೇಕಾಗಿತ್ತು? ಚೋಳನ್, ವರ್ಮ ನ್, ಪಾಂಡ್ಯನ್ ಮುಂತಾದ ಹೆಸರು ಇರಲಿಲ್ವೆ?
ರಾಜಕೀಯ ನಾಯಕರು ಸಹ ಇದರ ಬಗ್ಗೆ ಯಾವುದೇ ರೀತಿಯ ಸೊಲ್ಲೆತ್ತದೇ ಸುಮ್ಮನಾದರು, ಆದರೆ ಅವಮಾನ ವಾಗಿದ್ದು ನಮಗೆ ಅಲ್ವಾ.
ನಟ ಪ್ರಕಾಶ್ ರೈ ಹೊರ ರಾಜ್ಯದಲ್ಲಿ ಕನ್ನಡದ ಬಗ್ಗೆ ಎಂದಾದರು ಒಳ್ಳೆಯ ಮಾತುಗಳನ್ನು ಆಡಿದ್ದು ಇದುವರೆವಿಗೂ ಕೇಳಿಲ್ಲ. ಬೆಂಗಳೂರಿಗೆ ಬಂದಾಗ ಮಾತ್ರ ಅದು ಇದು ಅಂತ ಕುಯ್ತಾನೆ. ಆದರೆ ಕಾವೇರಿ ಗಲಾಟೆ ಸಂಧರ್ಭದಲ್ಲಿ ನಾನು ಕರ್ನಾಟಕದವನು ನಿಜ ಆದರೆ ನನ್ನ ಮಾತೃ ಭಾಷೆ ತುಳು ಎಂದು ಹೇಳಿ ಹಾಗಾಗಿ ನಾನು ಯಾರಿಗು ಸಪೋರ್ಟ್ ಮಾಡುವ ಪ್ರಶ್ನೆಯೇ ಬರುವುದಿಲ್ಲ ಎಂದಿದ್ದ. ಹೀಗಿರುವಾಗ ಕನ್ನಡಮ್ಮನ ಸೊಲ್ಲೆತ್ತದ ಇಂತಹವರಿಂದ ಕನ್ನಡದ ಬಗ್ಗೆ ಅಭಿಮಾನ ಹೇಗೆ ಬಯಸುತ್ತೇವೆ?
ಅವರ ಸಮರ್ಥನೆ ಸಹ ಅಸಹ್ಯ ತರಿಸುವಂತಹದ್ದು. ನಾಚಿಕೆ ಯಾಗಬೇಕು ಇಂತಹ ಜನರಿಗೆ. ಕೇವಲ ಹಣ ಹಾಗು ಹೆಸರಿನ ಹಿಂದೆ ಬಿದ್ದಿರುವಾಗ ಅಭಿಮಾನ, ಆಪ್ಯಾಯತೆ, ಪ್ರೀತಿ ವಿಶ್ವಾಸ ಅರಿವೆಲ್ಲಿರುತ್ತೆ.
ಏನೇ ಆಗಲಿ, ಕನ್ನಡಮ್ಮ ನ ಸೇವೆಗೆ ತುಳು, ಕೊಂಕಣಿ, ತೆಲುಗು, ಬ್ಯಾರಿ, ಉರ್ದು ಹಾಗು ಮತ್ತಿತರ ಮಾತೃ ಭಾಷಿಕರು ಕೊಟ್ಟಿರುವ ಕೊಡುಗೆ ಎಂತದ್ದು ಎನ್ನುವುದು ಎಲ್ಲರಿಗೂ ಗೊತ್ತು. ಅವರಿಗಿರುವ ಅಭಿಮಾನ ಈ ನಾಡಿನಲ್ಲಿ ಹುಟ್ಟಿ ಆಡಿ ಬೆಳೆದ ಈ ನಾಡಿನ ಪ್ರತಿಯೊಬ್ಬ ಕಂದಮ್ಮ ಗಳಿಗೆ ಮಾದರಿಯಾಗಲಿ.

ಮಂಗಳವಾರ, ಜುಲೈ 26, 2011

ಪವಿತ್ರ /ಅಪವಿತ್ರ

ನಮ್ಮಲ್ಲಿನ ಪತ್ರಿಕಾ ವರದಿಗಾರರು ಪಕ್ಷಪಾತಿ ಯಾಗಿ ಹೇಗೆ ಕೆಲಸ ಮಾಡುತ್ತಾರೆ ಎನ್ನುವುದಕ್ಕೆ ಅವರು ನೀಡುತ್ತಿರುವ ವರದಿಗಳೇ ಕಾರಣ. ಸನ್ಮಾನ್ಯ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ವನ್ನು ಬೀಳಿಸಬೇಕೆಂದು ನಮ್ಮ ಕೆಲ ಪತ್ರಕರ್ತ ಮಿತ್ರರು ನಿರ್ಧಾರ ಮಾಡಿದ್ದಾರೆಂದು ಕೆಲ ಪತ್ರಿಕಾ ವರದಿಗಳನ್ನು ನೋಡಿದರೆ ಗೊತ್ತಾಗುತ್ತೆ. ಬಲಪಂತೀಯ ಹಾಗು ಜಾತೀವಾದಿ ಸರ್ಕಾರವನ್ನು ಶತಸಿದ್ದ ತೆಗೆದು ಹಾಕಲೇ ಬೇಕೆಂದು ನಿರ್ಧರಿಸುವಂತಿದೆ ಈ ಜನ.

ಮಾಡಿದ್ದುಣ್ಣೊ ಮಹರಾಯ ಯಾರ್ಯಾರು ತಪ್ಪು ಮಾಡಿದ್ದಾರೊ ಅವರು ಅನುಭವಿಸುವುದು ಸಹಜ. ಸ್ವಜನ ಪಕ್ಷಪಾತಿ ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು. ಉಪ್ಪು ತಿಂದವನು ನೀರು ಕುಡಿಯಲೇ ಬೇಕು.



ನಿನ್ನೆ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು ಆಷಾಢ ಮಾಸದ ಅಂಗವಾಗಿ ಭಾನುವಾರ ಚಾಮುಂಡಿ ಬೆಟ್ಟವನ್ನು ಬರಿಗಾಲಲ್ಲಿ ಹತ್ತಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ್ದರು. ಮೈಸೂರಿನ ಬಹು ಜನ ಗಮನಿಸಿದ ಹಾಗೆ ಸಚಿವರು ಕಳೆದ ೩ ವರ್ಷಗಳಿಂದ ಈ ಕಾರ್ಯ ಮಾಡುತ್ತ ಬಂದಿದ್ದಾರೆ ಆದರೆ ಮಾಧ್ಯಮಗಳಲ್ಲಿ ವರದಿ ಯಾಗಿದ್ದು ಮಾತ್ರ ಇಂಧನ ಸಚಿವೆ ಸರ್ಕಾರದ ಉಳಿವಿಗಾಗಿ ಶೋಭಾ ಚಾಮುಂಡಿ ಪೂಜೆ ಎಂದು.


ಮೊದಲೇ ಸರ್ಕಾರ ಸಂಕಷ್ಟದಲ್ಲಿದೆ, ಅಂತದ್ರಲ್ಲಿ ಈ ಯಮ್ಮ ಹತ್ತಿದ್ದಕ್ಕು ಪೂಜೆ ಮಾಡಿದ್ದಕ್ಕು ಸರಿ ಹೋಯ್ತು,ಹಾಗೆನೆ  ಕಾಗೆ ಕುಳಿತುಕೊಳ್ಳೋದಕ್ಕು ಮರದ ಕೊಂಬೆ ಬಿತ್ತು ಅನ್ನುವ ಹಾಗೆ ಇಂತಹದಕ್ಕೆ ಕಾಯುತಿದ್ದ ಪ್ರತಿಪಕ್ಷದವರು ಹಾಗು ಮಾಧ್ಯಮದವರು ತಮಗೆ ಬೇಕಾದ ಬಣ್ಣ ಬಳಿದು ಅದಕ್ಕೊಂದು ಅಪವಿತ್ರ ಅನ್ನುವ ಹಾಳೆ ಯನ್ನು ಅಂಟಿಸಿ ಈಗ ಮಜಾ ತೆಗೆದುಕೊಳ್ಳುವ ಕಾರ್ಯ ನಡೆಯುತ್ತಿದೆ.
ಶೋಭಾ ಮೇಡಮ್ ಬೆಟ್ಟ ಹತ್ತಿದ್ದಕ್ಕೆ ಮೆಟ್ಟಿಲುಗಳ ಪಾವಿತ್ರ್ಯ ಹಾಳಾಗಿದೆ ಎಂದು ಕೈ ಕಾರ್ಯಕರ್ತರು ಕೈಯಿಂದ ಮೆಟ್ಟಿಲುಗಳನ್ನು ತೊಳೆಯುವ ಕಾರ್ಯ ನಡೆಸಿಯೇ ಬಿಟ್ಟರು. ಜತೆಗೆ  ನೂರಾರು ಕಾಂಗ್ರೆಸ್ ಕಾರ್ಯಕರ್ತರು ಶೋಭಾ ಕರಂದ್ಲಾಜೆಗೆ ಧಿಕ್ಕಾರ, ಶೋಭಾ ಮೆಟ್ಟಿಲು ಏರಿದ್ದರಿಂದ ಮೆಟ್ಟಿಲಿಗೆ ಕಳಂಕ ಎಂಬ ಘೋಷಣೆ  ಸಹ ಕೂಗಿದರು.
ಈ  ಜಾತ್ಯಾತೀತ ವಾದಿ ಕಾಂಗ್ರೆಸ್ಸಿಗರಿಗೆ ಪವಿತ್ರ ಅಪವಿತ್ರ ಅನ್ನೋ ಶಬ್ದ ಅವರ ಶಬ್ದಕೋಶದಲ್ಲಿ ಇದೆಯಾ ಎಂದು ಹುಡುಕಿ ನೋಡಬೇಕು!:) 
ಅಲ್ಲಾ ಸ್ವಾಮಿ ಸಮಯಕ್ಕೆ ತಕ್ಕಂತೆ ಬಣ್ಣ ಬದಲಾಯಿಸ್ತಾರಲ್ಲ ಇವರು ಎಂತಹ ಜನ! ದೇವರು, ಭಗವದ್ಗೀತೆ, ರಾಮಾಯಣ, ಮಹಾಭಾರತ, ಹಿಂದೂ, ವೇದ, ಮುಂತಾದ ಶಬ್ದಗಳನ್ನು ಎಂದೋ ತಮ್ಮ ಡಿಕ್ಷನರಿಯಿಂದ ಇವರು ಕಿತ್ತು ಹಾಕಿದ್ದಾರೆ, ಹೀಗಿರುವಾಗ ಪವಿತ್ರ ಅಪವಿತ್ರ ಅನ್ನೋ ಪ್ರಶ್ನೆ ಎಲ್ಲಿಂದ ಬಂತು?
ಸುಮ್ಮನೆ ಪ್ರಚಾರಕ್ಕೆ ಏನೇನೋ ಗಿಮಿಕ್ ಮಾಡ್ತಾ ಟೈಮ್ ಪಾಸ್ ಮಾಡ್ತಾ ಇರೋ ಜನ ಇವರು. 
ಈ ಲೇಖನ ಬರಿಯೋ ಹೊತ್ನಲ್ಲಿ ಟಿವಿ ಯಲ್ಲಿ ಮಾಜಿ ಸಂಸದೆ ತೇಜಸ್ವಿನಿ ಯವರಿಗೆ ಕಾಂಗ್ರೆಸ್ಸ್ ಕಾರ್ಯಕರ್ತ ರಿಂದ ಹಲ್ಲೆ ಎಂದು ವಾರ್ತೆ ಯಲ್ಲಿ ಬರ್ತಾ ಯಿತ್ತು. 
ಮೊದಲೇ ನೂರಾರು ಸಮಸ್ಯೆಗಳನ್ನು ಒಡಲಲ್ಲಿ ಕಟ್ಟಿಕೊಂಡಿರೋ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಮತ್ತೊಮ್ಮೆ ಸಾಬೀತಾಗಿದೆ

ಶುಕ್ರವಾರ, ಜುಲೈ 22, 2011

ಕನ್ನಡಿಗರೆಂದರೆ ನಾಯಿಗಳಾ?

ಕನ್ನಡಿಗರೆಂದರೆ ನಾಯಿಗಳಾ?

ಸಿಂಗಮ್ ಚಿತ್ರದಲ್ಲಿ ನಟರಾದ ಅಜಯ್ ದೇವಗನ್ ಹಾಗು ಪ್ರಕಾಶ್ ರೈ ರವರ ಮಧ್ಯೆ ನಡೆಯುವ ಸಂಭಾಷಣೆ ಯಲ್ಲಿ ನಾಯಿಗಳು ಎನ್ನುವ ಪದ ತೂರಿ ಬರುತ್ತೆ.

ಪ್ರಕಾಶ್ ರೈ : ಕರ್ನಾಟಕ ಬಾರ್ಡರ್ ಇಂದ ೧೦೦೦ ಜನರನ್ನು ಕರೆದು ಕೊಂಡು ಬರುತ್ತೇನೆ.
ಅಜಯ್ ದೇವಗನ್: ಆ ಸಾವಿರ ನಾಯಿಗಳಿಗೆ ನಾನೊಬ್ಬ ಸಿಂಹ ಸಾಕು ಎನ್ನುತ್ತಾನೆ. ನನ್ನ ಹಿಂದೆ ಇಡೀ ಒಂದು ಜಿಲ್ಲೆ ಇದೆ ಎಂದು ರಾಜರೋಷವಾಗಿ ಅಜಯ್ ಹೇಳುತ್ತಾನೆ.

ಇದು ನಿಜವಾಗಲೂ ಬೇಕಿತ್ತಾ? ಈ ಮೇಲಿನ ಮಾತುಗಳು ಖಂಡಿತ ಆಕ್ಷೇಪಾರ್ಹ ವಾದದ್ದು.



ಆಗಲೆ ಕರವೇ ಚಿತ್ರ ಪ್ರದರ್ಶನಕ್ಕೆ ಅಡ್ಡಿ ಪಡಿಸಿದೆ ಹಾಗು ಬೆಂಗಳೂರಿನ ಪೋಲಿಸರು ಚಿತ್ರ ವೀಕ್ಷಿಸಿ ಆಕ್ಷೇಪಾರ್ಹ ದೃಶ್ಯ ಹಾಗು ಸಂಭಾಷಣೆ ಗಳ ಬಗ್ಗೆ ಪರಿಶೀಲಿಸುತಿದ್ದಾರೆ. ಈ ವಿವಾದದಿಂದ ಖರ್ಚಿಲ್ಲದೆ ಪ್ರಚಾರ ವನ್ನು ಚಿತ್ರ ಗಿಟ್ಟಿಸುತ್ತಿದೆ. ಇಂತಹ ಮಾತುಗಳಿರುವ ಚಿತ್ರವನ್ನು ನೋಡಲು ಮಹರಾಷ್ಟ್ರ ದಾದ್ಯಂತ ಚಿತ್ರ ನೋಡಲು ಜನ ಮುಗಿಬೀಳುತಿದ್ದಾರೆನ್ನುವ ವರದಿಯಿದೆ.
 ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರಿನಾದ್ಯಂತ ಶುಕ್ರವಾರ ಕನ್ನಡ ಪರ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸುತ್ತಿವೆ ಚಿತ್ರವನ್ನು ಕರ್ನಾಟಕದಾದ್ಯಂತ ಬಿಡುಗಡೆ ಮಾಡಬಾರದು ಎಂದು ಒತ್ತಾಯಿಸುತ್ತಿರುವ ಪ್ರತಿಭಟನಾಕಾರರು ಹುಬ್ಬಳ್ಳಿಯ ಅಪ್ಸರ ಚಿತ್ರಮಂದಿರವನ್ನು ದ್ವಂಸ ಮಾಡಿದ್ದು, ಪ್ರದರ್ಶನ ನಿಲ್ಲಿಸಲಾಗಿದೆ. ಪ್ರತಿಭಟನಾ ನಿರತ 20 ಮಂದಿಯನ್ನು ಬಂಧಿಸಲಾಗಿದೆ. ಆಗಲೆ ಮೊದಲನೇ ಚಿತ್ರ ಪ್ರದರ್ಶನ ರದ್ದಾಗಿದೆ ಹಾಗು ಯಾವುದೇ ಅಹಿತಕರ ಘಟನೆ ಬಾರದಂತೆ ಚಿತ್ರ ಮಂದಿರಗಳಲ್ಲಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ.
ಚಿತ್ರ ನಿರ್ದೇಶಿಸಿರುವ ಕನ್ನಡಿಗ ರಾದ ರೋಹಿತ್ ಶೆಟ್ಟಿ ಹಾಗು ನಟರಾದ ಪ್ರಕಾಶ್ ರೈ ಇಂತಹ ಸಂಭಾಷಣೆ ರಾಜ್ಯದಲ್ಲಿ ಘರ್ಶಣೆ ಗೆ ಎಡೆ ಮಾಡಿಕೊಡುತ್ತವೆ  ಎನ್ನುವ ಅರಿವಿರಲಿಲ್ಲವೇ? ಸುಖಾ ಸುಮ್ಮನೆ ಅನವಶ್ಯಕ ವಿವಾದಗಳನ್ನು ಮೈಮೇಲೆ ಎಳೆದು ಕೊಳ್ಳುವ ಸಿನಿಮಾ ಮಂದಿಗೆ ಏನೆನ್ನಬೇಕು.
ಪ್ರಕಾಶ್ ರೈ "ಇದು ಇಬ್ಬರು ಮರಾಠಿ ಪಾತ್ರದಾರಿ ಗಳ ನಡುವೆ ನಡೆಯುವ ಸಂಭಾಷಣೆ ಯಾಗಿದ್ದು ಕನ್ನಡಿಗರು ಬೇಸರಿಸಿಕೊಳ್ಳುವ ಅಗತ್ಯ ವಿಲ್ಲ ಎಂದು ಸಮಜಾಯಿಷಿ ಕೊಟ್ಟಿದ್ದಾರೆ. ಮೊದಲೇ ಮಹರಾಷ್ಟ್ರ ದ ಜತೆ ನಮ್ಮ ಸಂಭಂಧ ಸರಿಯಾಗಿಲ್ಲ, ಈಗಲೆ ಹಲವಾರು ವಿವಾದಗಳ ನಡುವೆ ರಾಜ್ಯದ ಗಡಿಭಾಗದಲ್ಲಿರುವ ಜನರು ನೆಮ್ಮದಿ ಯಿಲ್ಲದೆ ಬದುಕುತಿದ್ದಾರೆ, ಈ ಸಂಧರ್ಭದಲ್ಲಿ  ಇಂತಹ ಹೊಸ ವಿವಾದ ಅನವಶ್ಯಕ ವಾಗಿದ್ದು ಮತ್ತೊಮ್ಮೆ ಸಿನಿಮಾ ಮಂದಿ ಹಣವೇ ಮುಖ್ಯ ಎನ್ನುವುದು ಸಾಭೀತಾಗಿದೆ.
ಕರವೇ ಅಧ್ಯಕ್ಷ ನಾರಾಯಣ ಗೌಡರು ವಿವಾದಾತ್ಮಕ ದೃಶ್ಯ ಹಾಗು ಸಂಭಾಷಣೆ ಗಳಿಗೆ ಕತ್ತರಿ ಹಾಕಿದರೆ ಸಿನಿಮಾ ಪ್ರದರ್ಶನಕ್ಕೆ ಅಡ್ಡಿ ಪಡಿಸುವುದಿಲ್ಲ ವೆಂದು ಹೇಳಿದ್ದಾರೆ. ಆದರೆ ಆಗ ಬೇಕಾದ ಡ್ಯಾಮೇಜ್ ಆಗಿ ಕತ್ತರಿ ಹಾಕಿದರೆ ಪ್ರಯೋಜನ ವೇನು ಬಂತು.

ವಿ.ಭಟ್ಟರೇ ಇದೆಲ್ಲ ಬೇಕಿತ್ತಾ?


ವಿ.ಭಟ್ಟರೇ ಇದೆಲ್ಲ ಬೇಕಿತ್ತಾ?
ಎರಡು ಎಡವಟ್ಟುಗಳು
೧. ತಪ್ಪಾಯ್ತು ತಿದ್ಕೋತೀವಿ.
೨. ಕ್ರಿಯೇಟಿವಿಟಿ ಶೀರ್ಷಿಕೆ.

ಮೊದಲನೆಯದಾಗಿ, ತಪ್ಪಾಯ್ತು ತಿದ್ಕೋತೀವಿ ಅಂಕಣ. ಕೆಲ ಸಾರಿ ಉತ್ತಮ ಮಾಹಿತಿಗಳನ್ನು ನಾವು ಇಲ್ಲಿ ಕಾಣಬಹುದು. ಹಾಗು ಓದುಗರು ಸಹ ಬುದ್ದಿವಂತರು ಎಂದು ಸಾರಿ ಸಾರಿ ಹೇಳುತ್ತೆ ಈ ಅಂಕಣ. ಕೆಲ ಉತ್ತಮ ವಿಚಾರ ಹಾಗು ಚರ್ಚೆಗಳನ್ನು ಸಹ ನಾವು ಕಂಡಿದ್ದೇವೆ.
ಆದರೆ ಪ್ರಶ್ನೆ ಇರೋದು ಲೇಖನದ ದಾಟಿಯಲ್ಲಿ. ಕೆಲವೊಮ್ಮೆ ಓದುಗರನ್ನು ಟೀಕಿಸಿ ಬರೆದ ಹಾಗಿರುತ್ತೆ. ಅಮಾಯಕ ಓದುಗರು ಇದು ತಪ್ಪು ಅದು ತಪ್ಪು ಎಂದು ಬರೆದು ಕಳಿಸಿದರೆ ಅಂತವರನ್ನು ಹೀಯಾಳಿಸಿದ್ದು ಉಂಟು. ಕೆಲ ತಪ್ಪು ಗಳನ್ನು ಹೆಕ್ಕಿ ಕಳುಹಿಸಿದ ಪತ್ರಗಳನ್ನು ಅಥವ ಈಮೈಲ್ ಗಳನ್ನು ಮಾನ್ಯ ಮಾಡುವುದೇ ಇಲ್ಲ, ಕೊನೆ ಪಕ್ಷ ಅವುಗಳಿಗೆ ಉತ್ತರಿಸುವ ಮನಸ್ಥಿತಿ ಇಲ್ಲವೇ ಇಲ್ಲ. ಇಲ್ಲಿ ಮಾನ್ಯ ಮಾಡುವ ಪತ್ರಗಳು ಯಾವುವೆಂದರೆ, ಕೆಲ ವಿದ್ವಾಂಸರು, ಶಿಕ್ಷಕರು, ವಕೀಲರು, ಪಂಡಿತರು ಕೆಲ ಈಮೇಲ್ ಮಿತ್ರರು ಹಾಗು ಪ್ರಸಿದ್ದಿ ಪಡೆದ ಕೆಲ ಲೇಖಕರು ಬರೆದ ಪತ್ರಗಳು.  ಎಲ್ಲರ ಪತ್ರಗಳನ್ನು ಮಾನ್ಯ ಮಾಡಿದರೆ ಪತ್ರಿಕೆ ಯಲ್ಲಿ ಜಾಗವೇ ಇರುವುದಿಲ್ಲ ಎನ್ನುವುದು ಸತ್ಯ. ಆಯ್ದ ಕೆಲ ಹಾಗು ನಿಜವಾಗಲು ತಪ್ಪು ಎಂದು ಗುರುತಿಸಲ್ಪಡುವ ಲೇಖನಗಳನ್ನು ಆಯ್ದು ಪ್ರಕಟಿಸುತ್ತಾರೆ ಎನ್ನುವುದು ಸತ್ಯ.
ತಪ್ಪುಗಳನ್ನು ಸಮರ್ಥಿಸುವ ಪರಿಯಿದೆಲ್ಲ, ಅದು ನಿಜಕ್ಕೂ ಮೆಚ್ಚುವಂತಹದ್ದೇ? ಪತ್ರ ಬರೆದ ಓದುಗರನ್ನು ಹೀಯಾಳಿಸಿ ಅಥವ ಟೀಕಿಸಿ ಪ್ರಕಟಿಸುವುದು ಎಷ್ಟು ಸಮಂಜಸ?  ತಪ್ಪುಗಳು ಆದರು ಸಹ ಅದು ಅಂತಹ ಘೋರ ತಪ್ಪಲ್ಲ, ಆ ಪತ್ರಿಕೆ ಈ ಪತ್ರಿಕೆ ಆ ದೇಶದಲ್ಲಿ ಈ ದೇಶದಲ್ಲಿ ಅದು ಇದು ಅಂತ ಸಮಜಾಯಿಷಿ ಕೊಡ್ತಾರೆ. ಮೊದಲನೆಯದಾಗಿ ನಾವು ಓದುಗರು ಅಂಕಣ ವನ್ನು ಶುರು ಮಾಡಿ ಅಂತ ಇವರನ್ನು ಕಾಡಿದ್ವಾ? ಆಯ್ತು ಶುರು ಮಾಡಿದ್ರಿ, ಆದರೆ ಅದಕ್ಕೆ ನಾದರು ನಿರ್ದಿಷ್ಟ ಮಾನದಂಡ ವೇನಾದರು ಇಟ್ಟಿದ್ದೀರಾ? ಸುಮ್ಮನೆ ಇರಲಾರದೆ ಇರುವೆ ಬಿಟ್ಕೊಂಡು ಒದ್ದಾಡೊ ಪರಿಸ್ಥಿತಿ ಇದ್ದ ಹಾಗಿದೆ ಈಗ. ವಿಜಯಕರ್ನಾಟಕದಲ್ಲಿ ಇದ್ದ ಹಾಗೆ ತಪ್ಪು ಒಪ್ಪು ಹಾಗೇನಾದರು ಇದ್ದಿದ್ದರೆ ಯಾವುದೇ ಗೊಂದಲ ವಿರುತ್ತಿರಲಿಲ್ಲ.

ಎರಡನೆಯದಾಗಿ, ಚಿತ್ರ ವಿಚಿತ್ರ ಶೀರ್ಷಿಕೆ ಗಳು.ದೇವರಿಗೆ ಪ್ರೀತಿ.
ಕೆಲ ಮುಖ್ಯ ವರದಿಗಳಿಗೆ ಸ್ಪಷ್ಟ ಶೀರ್ಷಿಕೆ ಕೊಟ್ಟು, ರಂಜಿಸುವ ವರದಿಗಳಿಗೆ ಬೇಕಾದರೆ ಕ್ರಿಯಾಶೀಲತೆ ಪ್ರಯೋಗ ಮಾಡಿದರೆ ಮೆಚ್ಚಿಕೊಳ್ಳೋದು ಸಹಜ. ಟ್ಯಾಬಲಾಯ್ಡ್ ಪತ್ರಿಕೆ ಗಳಾದರೆ ಅವುಗಳಿಗೆ ಮಾರಾಟವಾಗಲು ಅಂತಹ ಶೀರ್ಷಿಕೆ ಗಳೆ ಮುಖ್ಯ ಬಂಡವಾಳ. ಪತ್ರಿಕೆ ಗಳಿಗೆ ಅಂತಹ ಅವಕಶ್ಯತೆ ಏನಿದೆ. ಇಂತಹ ತಲೆ ಬರಹಗಳು ಗೊಂದಲ ಮೂಡಿಸುತ್ತವೆ ವಿನಹ ಅದರಿಂದ ಯಾವುದೇ ಪ್ರಯೋಜನ ವಾಗಲ್ಲ. ಬೇಕಾದಷ್ಟು ಸಾರಿ ಓದುಗರೇ ಈ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಆದರೆ ಮತ್ತೆ ಅದೇ ಸಮರ್ಥನೆ ಗಳನ್ನು ಪದೇ ಪದೇ ಕೊಡುವ ಪ್ರಯತ್ನ ಮಾಡುತಿದ್ದಾರೆ. ಕ್ರಿಯಾಶೀಲತೆ , ಪ್ರತಿಯೊಂದರಲ್ಲಿ ಒಂದು ಹೊಸತನ ಇರಲೇ ಬೇಕೆಂದು ಬಯಸುವ ಮನಸ್ಥಿತಿ ಇರುವುದರಿಂದ ಈ ಅತಿ ಉತ್ಸಾಹ ಯಾವಗಲು ಗೊಂದಲಕ್ಕೀಡು ಮಾಡುತ್ತದೆ. ಕೆಲವೊಮ್ಮೆ ನಾವು ವಿಜಯಕರ್ನಾಟಕ ಓದ್ತಾ ಇದೀವಾ ಅಥವ ಕನ್ನಡಪ್ರಭ ಓದ್ತಾ ಇದೀವ ಅಂತ ಅನ್ನಿಸುತ್ತೆ. ಏನೇನು ಮಾಡ್ತೀವಿ ನೋಡ್ತಾ ಯಿರಿ ಅಂತಾರೆ, ಅಂದಹಾಗೇನೆ ಇಂತಹ ಗೊಂದಲಗಳನ್ನು ಸೃಷ್ಟಿ ಮಾಡ್ತಾರೆ.
ಮೊದಲಿನಿಂದಲೂ ಕನ್ನಡಪ್ರಭ ಓದುತಿದ್ದ ಓದುಗರು ಇವರ ಕೆಲ ಪ್ರಯೋಗ ಶೀಲತೆಗೆ ಬೇಸರಿಸಿಕೊಂಡು ಗೋಡೆ ಬರಹ ಅಂಕಣದಲ್ಲಿ ಪ್ರತಿಕ್ರಿಯಿಸಿದ್ದಾರೆ.




ಗೀತಾ ವಿವಾದ: ಸುದ್ದಿಯ ಕಿಡಿ ಹೊತ್ತಿಸುವುದು ಹೇಗೆ?

(ಬದಲಾವಣೆಯೇ ಜಗದ ನಿಯಮ ಹಾಗು ವೆಬ್ ದುನಿಯಾದಲ್ಲಿ ಪ್ರಕಟವಾದ ಲೇಖನ)
ಅವಿನಾಶ್.ಬಿ ರವರು ಬರೆದ ಲೇಖನ.
|ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ|
ಈ ಸಾಲನ್ನು ಕೇಳದವರು ಬಹುಶಃ ತುಂಬಾ ವಿರಳ. ಯಾವುದೇ ಭಾಷಣಗಳಲ್ಲಿಯೋ, ಪ್ರವಚನಗಳಲ್ಲೋ, ಆಗಾಗ್ಗೆ ನಾವಿದನ್ನು ಕೇಳುತ್ತಲೇ ಇರುತ್ತೇವೆ. ಇದರ ಸಂಕ್ಷಿಪ್ತ ವಾಚ್ಯಾರ್ಥವೆಂದರೆ ‘ಪ್ರತಿಫಲಾಪೇಕ್ಷೆಯಿಲ್ಲದೆ ಕೆಲಸ ಮಾಡುತ್ತಾ ಇರು, ಒಳ್ಳೆಯದಾಗುತ್ತದೆ’ ಅಂತ. ‘ನಿರೀಕ್ಷೆ ಇಟ್ಟುಕೊಂಡು ಫಲ ದೊರೆಯದೇ ಹೋದಾಗ ಆಗುವ ಆಘಾತಕ್ಕಿಂತ ನಿರೀಕ್ಷೆ ಇಟ್ಟುಕೊಳ್ಳದೆಯೇ ಫಲ ದೊರೆತಾಗ ಆಗುವ ಆನಂದಕ್ಕೆ ಪಾರವಿಲ್ಲ. ಹೀಗಾಗಿ ನಿರೀಕ್ಷೆ ಬೇಡ’ ಎಂಬುದು ಭಾವಾರ್ಥ.
ಇದು ಭಗವದ್ಗೀತೆಯ ಅತ್ಯಂತ ಮಹತ್ವದ ಬೋಧನೆಯೂ ಹೌದು. ಕಳೆದ ನಾಲ್ಕು ವರ್ಷಗಳಿಂದ ಅವ್ಯಾಹತವಾಗಿ ಇಡೀ ಕರ್ನಾಟಕ ರಾಜ್ಯದ ಬಹುತೇಕ ಶಾಲೆಗಳಲ್ಲಿ ನಡೆಯುತ್ತಿದ್ದ ಭಗವದ್ಗೀತಾ ಅಭಿಯಾನವೊಂದು, ತೀರಾ ಇತ್ತೀಚೆಗೆ ವಿವಾದಕ್ಕೆ ಸಿಲುಕಿದೆ. ಅದು ಕೂಡ ಅನಗತ್ಯ ಕಾರಣಗಳಿಗೆ ಎಂಬುದನ್ನು ಸ್ಪಷ್ಟಪಡಿಸುವುದು ಈ ಲೇಖನದ ಉದ್ದೇಶ.
ಹಾಗಾದರೆ ನಮ್ಮ ಮಾಧ್ಯಮಗಳು ಎಡವಿದ್ದೆಲ್ಲಿ?
ನಮ್ಮ ಮಾಧ್ಯಮಗಳ ಮನಸ್ಥಿತಿ, ಎಲ್ಲವನ್ನೂ ಬ್ರೇಕಿಂಗ್ ನ್ಯೂಸ್ ಆಗಿಸುವ ಧಾವಂತವಿರುವ ‘ಅತ್ಯುತ್ಸಾಹೀ’ ಪತ್ರಕರ್ತರ ಗಡಣವೊಂದು ಸೃಷ್ಟಿಯಾಗುತ್ತಿರುವುದು ಇಲ್ಲಿ ಎದ್ದುಕಾಣುತ್ತದೆ ಮತ್ತು ಅದರಿಂದ ಏನೆಲ್ಲಾ ನಡೆಯಬಹುದು ಎಂಬುದಕ್ಕೆ ಇದೂ ಒಂದು ಉದಾಹರಣೆ ಅಂತಲೂ ನಾವು ಗಮನಿಸಬೇಕು.
ಈಗ ಎಲ್ಲಿ ನೋಡಿದರಲ್ಲಿ, ಭಗವದ್ಗೀತೆ ಬೇಕೋ, ಬೇಡವೋ ಅನ್ನೋ ಚರ್ಚೆ, ಶಿಕ್ಷಣ ಮಂತ್ರಿ ಕಾಗೇರಿ ವಿಶ್ವೇಶ್ವರ ಹೆಗಡೆಯವರು “ಭಗವದ್ಗೀತೆ ಕಲಿಯದಿದ್ದರೆ ದೇಶ ಬಿಟ್ಟು ಹೋಗಿ” ಅಂತ ಫರ್ಮಾನು ಹೊರಡಿಸಿದ್ದಾರೆ ಎಂಬ ಮಾತೇ ಕೇಳಿ ಬರುತ್ತಿದೆ. ಬಹುತೇಕ ಜವಾಬ್ದಾರಿಯುತ ಮಾಧ್ಯಮಗಳಲ್ಲಿ ಕೂಡ ಕಾಗೇರಿಯವರ ಈ ನುಡಿಯೇ ಶೀರ್ಷಿಕೆಯಲ್ಲಿ ರಾರಾಜಿಸುತ್ತಿದೆ. ಆದರೆ ಕೆಲವು ಮಾಧ್ಯಮಗಳು ಶೀರ್ಷಿಕೆ ತಪ್ಪಾಗಿ ನೀಡಿದರೂ, ಒಳಗೆ ಸರಿಯಾದ ಹೇಳಿಕೆ ಪ್ರಕಟಿಸಿವೆ ಎಂಬುದನ್ನೂ ಮರೆಯುವಂತಿಲ್ಲ. ಆದರೆ, ಈಗ ಒಳಗೇನಿದೆ ಎಂದು ಓದೋ ಪುರುಸೊತ್ತು, ತಾಳ್ಮೆ ಯಾರಿಗಿದೆ?
ಸರಿ, ಕೋಲಾರದಲ್ಲಿ ಶಾಲೆಗಳಲ್ಲಿ ಭಗವದ್ಗೀತೆ ಬೋಧಿಸುವ ಕಾರ್ಯವನ್ನು ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ) ಎಂಬ ಸಂಘಟನೆಯೊಂದು ವಿರೋಧಿಸಿ ಅಡ್ಡಿಪಡಿಸುತ್ತಿದೆ ಎಂಬ ವರದಿಗಳು ಬಂದಿದ್ದವು. ಅಲ್ಲಿಗೆ ಬಂದು ಭಗವದ್ಗೀತಾ ಅಭಿಯಾನದ ಸಮಾರಂಭದಲ್ಲಿ ಮಾತನಾಡಿದ ಕಾಗೇರಿ ಅವರು, “ಭಗವದ್ಗೀತೆ ಕಲಿಯಲು ನಿರಾಕರಿಸುವವರು ದೇಶ ಬಿಟ್ಟು ತೊಲಗಲು ಹೇಳಿದರು” ಅಥವಾ “ಭಗವದ್ಗೀತೆ ವಿರೋಧಿಸುವವರು ದೇಶ ಬಿಟ್ಟು ತೊಲಗಲಿ ಅಂತ ಹೇಳಿಕೆ ಕೊಟ್ಟರು” ಎಂದು ಸುದ್ದಿ ಮಾಧ್ಯಮಗಳೆಲ್ಲವೂ ಢಾಂ ಢೂಂ ಎಂದು ಬ್ರೇಕಿಂಗ್ ನ್ಯೂಸ್ ಕೊಟ್ಟವು. ಆದರೆ, ಕಾಗೇರಿಯವರ ಭಾಷಣದ ತುಣುಕನ್ನು ಕೇಳಿದ ಯಾವನೇ ಆದರೂ ಇದನ್ನು ಒಪ್ಪುವುದು ಸಾಧ್ಯವಿಲ್ಲ. ಇದನ್ನು ಅರ್ಥೈಸಿಕೊಂಡ ಪತ್ರಕರ್ತನೊಬ್ಬನ ಅಭಿಪ್ರಾಯವು ಹೆಡ್‌ಲೈನ್‌ನಲ್ಲಿ ಕಂಡು, ಸಮೂಹ ಸನ್ನಿಯಂತೆ ಎಲ್ಲರೂ ಪ್ರಚೋದನೆಗೊಳಗಾದರೇ ಹೊರತು, ವಾಸ್ತವಾಂಶವನ್ನು ಅರಿತುಕೊಳ್ಳುವ ಗೋಜಿಗೆ ಹೋದವರು ಕೆಲವೇ ಕೆಲವರು.
ವಾಸ್ತವವೇನು?
ನಾನೂ ಇದೇ ಟಿವಿ ಮಾಧ್ಯಮಗಳಲ್ಲಿ ಕಾಗೇರಿ ಭಾಷಣ ಕೇಳಿದ್ದೇನೆ. ಹೀಗಾಗಿ ವರದಿ ತಿರುಚುವಿಕೆಯೋ, ಅಥವಾ ಅಪಾರ್ಥ ಮಾಡಿಕೊಂಡು ಪತ್ರಕರ್ತರು ಒಟ್ಟಾಗಿ ವರದಿ ಮಾಡಿದರೋ, ಕಚೇರಿಯಲ್ಲಿದ್ದವರು ತಪ್ಪಾಗಿ ಶೀರ್ಷಿಕೆ ನೋಡಿದರೋ ಎಂಬುದು ಗೊತ್ತಿಲ್ಲ. ಹಾಗಿದ್ದರೆ ಕಾಗೇರಿ ಹೇಳಿದ್ದೇನು? ಇಲ್ಲಿದೆ ನೋಡಿ, ಆ ಬ್ರೇಕಿಂಗ್ ನ್ಯೂಸ್ ವಿವಾದಕ್ಕೆ ಕಾರಣವಾದ ಅಂಶ:
“ಯಾರು ಈ ದೇಶದ ಧರ್ಮ, ಸಂಸ್ಕೃತಿಯನ್ನು, ಈ ದೇಶದ ನಂಬಿಕೆಯ ವಿಷಯಗಳನ್ನು ಯಾರು ಗೌರವಿಸುವುದಿಲ್ಲವೋ, ಯಾರು ಅದಕ್ಕೆ ಮಾನ್ಯತೆ ಮಾಡುವುದಿಲ್ಲವೋ, ಯಾರು ವಿದೇಶೀ ತತ್ವದ, ಸಿದ್ಧಾಂತದ ಪ್ರೇರಣೆಗೆ ಒಳಪಟ್ಟಂಥವರಿದ್ದಾರೋ, ಅವರು ಇದನ್ನು (ಗೀತಾ ಅಭಿಯಾನವನ್ನು) ವಿರೋಧಿಸುತ್ತಾ ಇರೋದನ್ನ ನಾವು ಕಾಣ್ತೀವಿ. ಆ ವಿದೇಶೀಯರು ತಮ್ಮ ವಿಚಾರವನ್ನು ಮಂಡಿಸೋದಾದ್ರೆ, ಅವರು ವಿದೇಶಕ್ಕೇ ಹೋಗ್ಲಿ ಹೊರತು, ನಮ್ಮ ದೇಶದಲ್ಲಿ ಅವರಿಗೆ ಅವಕಾಶ ಇಲ್ಲ, ನಮ್ಮ ನಾಡಿನಲ್ಲಿ ಅವಕಾಶ ಇಲ್ಲ ಅನ್ನೋದನ್ನ ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ.”
ಇಲ್ಲಿ ಕಾಗೇರಿಯವರು, “ಭಗವದ್ಗೀತೆ ಕಲಿಯದವರು ದೇಶ ಬಿಟ್ಟು ಹೋಗಿ” ಎಂದರೇ? ಅರ್ಥೈಸಿಕೊಳ್ಳುವುದು ಓದುಗರಿಗೆ ಬಿಟ್ಟ ವಿಷಯ.
ನಮ್ಮ ಮನಸ್ಥಿತಿ 
ಇನ್ನು ಆ ಬಳಿಕ ನಡೆದ ಎರಡು ಚರ್ಚೆಗಳನ್ನು ಇಲ್ಲಿ ಉಲ್ಲೇಖಿಸುತ್ತೇನೆ. ಒಂದು ಕನ್ನಡದ ಸುವರ್ಣ ನ್ಯೂಸ್ ವಾಹಿನಿಯಲ್ಲಿ. ಇದು ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸಲು ಪೂರಕವಾಗುತ್ತದೆ ಎಂಬ ಸಿ.ಟಿ.ರವಿ, ಚಕ್ರವರ್ತಿ ಸೂಲಿಬೆಲೆ ವಾದಕ್ಕೆ ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತಾ ಅವರ ಮಾತು ಗಮನ ಸೆಳೆಯಿತು. ಅವರು ಹೇಳಿದ್ದನ್ನು ಇಲ್ಲಿ ದಾಖಲಿಸುತ್ತೇನಷ್ಟೇ. ಅದರ ವಿಶ್ಲೇಷಣೆ ಓದುಗರಿಗೇ ಬಿಡುತ್ತೇನೆ. “ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದವು. ಭಗವದ್ಗೀತೆ ಇಲ್ಲದೆಯೇ ಮಕ್ಕಳು ಕಲಿತಿದ್ದಾರೆ. ಅವರೆಲ್ಲರೂ ಸಮಾಜ-ವಿರೋಧಿಗಳಾಗಿದ್ದಾರೆಯೇ?”
ನಮ್ಮ ನಾಗರಿಕರನ್ನೇ ಪರಕೀಯರೆಂದರೇ ಧನಂಜಯ?
ಎರಡನೇ ಘಟನೆ. ಎನ್‌ಡಿಟಿವಿ ವಾಹಿನಿಯಲ್ಲಿ ಅದೇ ಮಂಗಳವಾರದ ದಿನ ಖ್ಯಾತ ಪತ್ರಕರ್ತೆ ಬರ್ಖಾ ದತ್ ನಡೆಸಿಕೊಡುವ ‘ದಿ ಬಕ್ ಸ್ಟಾಪ್ಸ್ ಹಿಯರ್’ ಎಂಬ ಕಾರ್ಯಕ್ರಮ. ಇದರಲ್ಲಿ ಬಿಜೆಪಿ ನಾಯಕ ಧನಂಜಯ ಕುಮಾರ್ ಅವರನ್ನು ಕರೆಸಲಾಗಿತ್ತು.
ಧನಂಜಯ ಕುಮಾರ್ ಮಾತನಾಡುತ್ತಾ, ಕಾಗೇರಿಯವರು ಹಾಗೆ ಹೇಳಿಯೇ ಇಲ್ಲ. ವಿದೇಶೀಯರು ನಮ್ಮ ನಂಬಿಕೆಗಳ ಮೇಲೆ ಆಕ್ರಮಣ ಮಾಡಿ, ತಮ್ಮ ಸಿದ್ಧಾಂತ ಹೇರಲು ಪ್ರಯತ್ನಿಸುತ್ತಿದ್ದಾರೆ. ಭಗವದ್ಗೀತೆ ಎಂಬುದು ಭಾರತೀಯ ಸಂಸ್ಕೃತಿ. ಉಳಿದವು ವಿದೇಶೀ ನಂಬಿಕೆಗಳು ಎಂದಾಗ ತಕ್ಷಣವೇ ಧನಂಜಯ ಮಾತನ್ನು ಅರ್ಧದಲ್ಲೇ ತುಂಡರಿಸಿದ ಬರ್ಖಾ, “ಅಂದರೆ ಗೀತೆ ಬಿಟ್ಟು ಉಳಿದೆಲ್ಲವೂ ಬೇರೆ ನಾಗರಿಕತೆಗೆ ಸೇರಿದಂತೆ. ಬೈಬಲ್, ಖುರಾನ್, ಗುರು ಗ್ರಂಥ ಸಾಹೀಬ ಮುಂತಾದವುಗಳಿಗೂ ಭಾರತಕ್ಕೂ ಸಂಬಂಧವಿಲ್ಲ ಎನ್ನುತ್ತಿದ್ದೀರಿ. ನೀವು ಈ ದೇಶದ ನಾಗರಿಕರನ್ನೇ ಹೊರಗಿನವರು ಅಂತ ಪರಿಗಣಿಸುತ್ತಿದ್ದೀರಿ. ನಿಮಗೆ ಈಗಲೂ ಒಂದು ಅವಕಾಶ ಕೊಡುತ್ತೇನೆ. ನಿಮ್ಮ ಮಾತುಗಳನ್ನು ಹಿಂತೆಗೆದುಕೊಳ್ಳಿ” ಅಂತ ತೀರ್ಪು ಸಹಿತ ಆಗ್ರಹ ಮಾಡಿದರು.
ನಾನು ಹೇಳಿದ್ದು ಹಾಗಲ್ಲ, ಸಿಖ್ಖರ ಗುರು ಗ್ರಂಥ ಸಾಹೀಬಾ, ಬೌದ್ಧ ಧರ್ಮ, ಇವೆಲ್ಲವೂ ಭಾರತೀಯ ಮೂಲದ್ದೇ. ಆದರೆ ಖುರಾನ್, ಬೈಬಲ್‌ಗಳು ವಿದೇಶದಿಂದ ಬಂದವು ಎಂಬ ಧನಂಜಯ್ ಮಾತಿಗೆ ಅಲ್ಲಿ ಅವಕಾಶವೇ ಇರಲಿಲ್ಲ. “ನೀವು ಉಳಿದವರನ್ನು ಪರಕೀಯರೆಂದು ಹೇಳುತ್ತಿದ್ದೀರಿ, ಭಗವದ್ಗೀತೆಯ ಮೂಲಕ ಶಿಕ್ಷಣದಲ್ಲಿ ಕೇಸರೀಕರಣ ಅಳವಡಿಸುತ್ತಿದ್ದೀರಿ” ಎಂದೇ ಜವಾಬ್ದಾರಿಯುತ ಪತ್ರಕರ್ತೆಯಾದ ಬರ್ಖಾ ಪದೇ ಪದೇ ಹೇಳುತ್ತಿದ್ದರು!
ನಾಲ್ಕು ವರ್ಷಗಳಿಂದ ಇಲ್ಲದ್ದು, ಈಗೇಕೆ ವಿರೋಧ?
ಇನ್ನು, ಮಕ್ಕಳಿಗೆ ಭಗವದ್ಗೀತೆ ಬೇಕೋ ಬೇಡವೋ ಎಂಬುದು ಓದುಗರಿಗೇ ಬಿಟ್ಟ ವಿಚಾರ. ಒಂದು ವಿಷಯದ ಅತಿ ವೈಭವೀಕರಣ ಯಾಕಾಗುತ್ತದೆ ಮತ್ತು ಹೇಗಾಗುತ್ತದೆ ಎಂಬುದಷ್ಟೇ ಇಲ್ಲಿರುವ ಜಿಜ್ಞಾಸೆ. ಭಗವದ್ಗೀತೆಯ ವ್ಯಾಪ್ತಿಯನ್ನು ಒಂದು ಧರ್ಮಕ್ಕೋ, ಮತಕ್ಕೋ, ಪಂಥಕ್ಕೋ, ವರ್ಗಕ್ಕೋ ಸೀಮಿತಗೊಳಿಸುವ ಸಂಕುಚಿತ ಮನೋಭಾವ ಭಯ ಹುಟ್ಟಿಸುವಂತಹುದು. ಅದು ಕೂಡ, ಇದುವರೆಗೆ ಇಲ್ಲದ ಯಾವುದೇ ವಿವಾದ ಈಗ ಧುತ್ತನೇ ಹೊತ್ತಿ ಉರಿಯುತ್ತಿರುವುದಾದರೂ ಹೇಗೆ?
ಯಾಕೆಂದರೆ, 2007ರಿಂದೀಚೆಗೆ ರಾಜ್ಯದ 26 ಜಿಲ್ಲೆಗಳಲ್ಲಿನ ಶಾಲೆಗಳಲ್ಲಿಯೂ ಸೋಂದಾ ಸ್ವರ್ಣಮಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ, ಆಸಕ್ತ ಮಕ್ಕಳಿಗೆ ಗೀತಾ ಬೋಧನೆ ನಡೆಯುತ್ತಿದೆ. ಕೆಲವು ಶಾಲೆಗಳಲ್ಲಿರುವಂತೆ ಬಳೆ ಧರಿಸಬಾರದು, ಬಿಂದಿ ಧರಿಸಬಾರದು, ಇಂಗ್ಲಿಷನ್ನೇ ಮಾತನಾಡಬೇಕು, ಪ್ರೇಯರ್ (ಪ್ರಾರ್ಥನೆ) ವೇಳೆ ನಾವು ಹೇಳಿಕೊಟ್ಟ ಪ್ರಾರ್ಥನೆಯನ್ನೇ ಪಠಿಸಬೇಕು… ಎಂಬಿತ್ಯಾದಿ ಅದೆಷ್ಟೋ ಕಟ್ಟಳೆಗಳಿರುತ್ತವೆ. ಆದರೆ ಈ “ಭಗವದ್ಗೀತೆ ಕಲಿಯಬೇಕು” ಎಂಬುದು ಕಟ್ಟು ನಿಟ್ಟಿನ ಆದೇಶವಲ್ಲ. ಹಾಗೆ ಹೇಳುವುದಾದರೆ ಇದು ಆರಂಭವಾಗಿದ್ದು ‘ಜಾತ್ಯತೀತ’ ಜನತಾ ದಳ ಅಧಿಕಾರದಲ್ಲಿದ್ದ ಕಾಲದಲ್ಲೇ. ಆಗ ಇಲ್ಲದ ಬೊಬ್ಬೆ, ಈಗ ದಿಢೀರನೇ ಹೇಗೆ ಬಂತು? ಭಗವದ್ಗೀತೆ ಬೋಧಿಸಿದ ಸ್ವಾಮೀಜಿಯನ್ನೇ ಬಂಧಿಸಿ ಎಂಬಷ್ಟು ಕೂಗಾಟ ಈಗೇಕೆ?
ಗೀತೆ, ಉಪನಿಷತ್ ಅಧ್ಯಯನ ನಡೆಸಿದ ಮುಸ್ಲಿಂ ವಿದ್ವಾಂಸರು, ಕೇರಳದ ಕ್ರೈಸ್ತ ಪಾದ್ರಿಗಳ ಬಗೆಗೂ ಕೇಳಿದ್ದೇವೆ. ಇಲ್ಲವೇ ಅನ್ಯಧರ್ಮೀಯ ಗ್ರಂಥಗಳನ್ನು ಓದಿ ಕರತಲಾಮಲಕವಾಗಿಸಿಕೊಂಡ ಹಿಂದುಗಳ ಬಗೆಗೂ ಕೇಳಿದ್ದೇವೆ.
“ವಿಮೃಶ್ಯೈತದಶೇಷೇಣ, ಯಥೇಚ್ಛಸಿ ತಥಾ ಕುರು” ಅಂದಿದೆ ಭಗವದ್ಗೀತೆ. ಅಂದರೆ ಸತ್ಪಥ ಯಾವುದು, ದುಷ್ಟ ಪಥ ಯಾವುದು ಎಂದು ವಿಶ್ಲೇಷಿಸಿ, ವಿಮರ್ಶಿಸಿ ಹೆಜ್ಜೆ ಇಡು, ಕಣ್ಣು ಮುಚ್ಚಿಕೊಂಡು ಇದನ್ನು ನಂಬಿ ಬಿಡಬೇಡ ಎಂದು ಕೊನೆಯಲ್ಲಿ ಹೇಳುತ್ತದೆ ಭಗವದ್ಗೀತೆ. ವಿಶ್ಲೇಷಿಸದೇ ಇದ್ದರೆ, ಇದೇ ಸಾಲನ್ನು “ಓಹ್, ಮನಬಂದಂತೆ ಮಾಡು ಅಂದಿದೆಯಲ್ಲಾ ಭಗವದ್ಗೀತೆ” ಅಂತಲೂ ಅರ್ಥೈಸಿಕೊಳ್ಳಬಹುದಲ್ಲ? ಹೀಗಾಗಿ, ಖುರಾನ್ ಆಗಲೀ, ಬೈಬಲ್ ಆಗಲೀ, ಗೀತೆಯೇ ಆಗಲಿ, ಜೀವನವನ್ನು, ಸನ್ಮಾರ್ಗವನ್ನು ಬೋಧಿಸುವಂಥವುಗಳು. ಅದನ್ನು ಅರ್ಥ ಮಾಡಿಕೊಳ್ಳಬೇಕಷ್ಟೇ. ಅಪಾರ್ಥ ಮಾಡಿಕೊಂಡರೆ ಅನಾಹುತ. ಸಚಿವರ ಹೇಳಿಕೆಯನ್ನೇ ತಪ್ಪಾಗಿ ಬಿಂಬಿಸಿದಂತೆ!

ಗುರುವಾರ, ಜುಲೈ 21, 2011

ಸಿ. ಸೋಮಶೇಖರಯ್ಯ ನವರ ಒಂದು ಉತ್ತಮ ಲೇಖನ

ಮಾನ್ಯ ಸಿ.ಸೋಮಶೇಖರಯ್ಯ, ಚಿತ್ರದುರ್ಗ. ರವರು ಬರೆದ

"ಭಗವದ್ಗೀತೆ , ಕೆಲವು ಸತ್ಯ ಮಿಥ್ಯಗಳು"

ಒಂದು ಉತ್ತಮ ಸಂಗ್ರಹಯೋಗ್ಯ ಲೇಖನ.  
ಲೇಖಕರು ಅನನ್ಯ ಅಲ್ಲಮ ಸರಣಿಯ ಖ್ಯಾತ ಬರಹಗಾರರು.
************************
ವರ್ತಮಾನದಲ್ಲಿ ಶಾಲೆಯಲ್ಲಿ ಭಗವದ್ಗೀತೆಯ ಅಭಿಯಾನ ಸರಿಯೇ ತಪ್ಪೆ ? ಎನ್ನುವುದಕ್ಕೆ ಈ ಲೇಖನ ಸಂಬಂಧಿಸಿದ್ದಲ್ಲ . ಶಾಲೆಯಲ್ಲಿ ಭಗವದ್ಗೀತೆಯ ಅಭಿಯಾನಕ್ಕೆ ವಿರೋಧಗಳಿದ್ದರೆ ಅದನ್ನು ಬಲವಂತವಾಗಿ ನಡೆಸಬೇಕಾಗಿಲ್ಲ ,  ಯಾವುದೇ ಅಭಿಯಾನವಿಲ್ಲದೆ ಅದು ರಚನೆಯಾದಂದಿನಿಂದ ಇಂದಿನವರೆಗೆ ಅದು ಅಧ್ಯಯನದ, ಸಂಶೋಧನೆಯ, ಜಿಜ್ಞಾಸೆಯ ಅದ್ಭುತ ಆಕರವಾಗಿ ಮುಂದುವರಿಯುತ್ತಿದೆ ;  ಭಗವದ್ಗೀತೆಯು  ಈ ಎಲ್ಲ ವಿವಾದಗಳಾಚೆಗೆ ಜಗತ್ತಿ ನಾದ್ಯಂತ ಮತ ಪಂಥಗಳ ಎಲ್ಲೆ ಇಲ್ಲದೆ ಜ್ಞಾನದಾಹಿಗಳಾದವರ ತೌಲನಿಕ  ಅಧ್ಯಯನದ ವಸ್ತುವಾಗಿಯೇ ಇದೆ . ಮುಖ್ಯವಾಗಿ ಭಗವದ್ಗೀತೆಯ ಮೇಲಿರುವ ಆಪಾದನೆಗಳು ಇವು 
೧ ಅದು ಹಿಂದೂಗಳ ಧರ್ಮ ಗ್ರಂಥ ಅದನ್ನು ಇತರ ಮತೀಯರ ಮೇಲೆ ಹೇರುವುದು ತಪ್ಪು 
೨ ಭಗವದ್ಗೀತೆ ಒಂದು ಯುದ್ದಕೋರ ಗ್ರಂಥ ,  ಶಾಂತಿಪ್ರಿಯರಿಗೆ ಅದು ಅಧ್ಯಯನ ಯೋಗ್ಯವಲ್ಲ 
೩ ಅದು ವರ್ಣಾಶ್ರಮಗಳನ್ನು ಗಟ್ಟಿಗೊಳಿಸುವ ವೈದಿಕರ ಹುನ್ನಾರ 
ಗೀತೆಯನ್ನು ಅರ್ಧಂಬರ್ಧ ಓದಿದವರು , ಓದಿದರೂ ಪೂರ್ವಾಗ್ರಹಗಳನ್ನುಳ್ಳವರು , ಓದದೆ ಯಾರೋ ಹೇಳಿದ್ದನ್ನು ಪಟ್ಟು ಹಿಡಿದು ಹೇಳುವವರು ಇವರೆಲ್ಲರ ಒಕ್ಕೊರಲಿನ ಕೂಗು ಇದು 
ಈಗ ಮೊದಲನೆಯ ಆಪಾದನೆಯ ವಿಷಯಕ್ಕೆ ಬರೋಣ . ಗೀತೆ ರಚನೆಯಾದ ಕಾಲಕ್ಕೆ ಹಿಂದೂ ಎಂಬ ಪದವೇ ಇರಲಿಲ್ಲ ; ಹಿಂದೂ ಧರ್ಮ ಅಂತನೂ ಯಾವುದೂ ಇರಲಿಲ್ಲ . ಭಾರತೀಯ ಸಾಂಸ್ಕೃತಿಕ ಜಗತ್ತಿನಲ್ಲಿ ನ್ಯಾಯ , ವೈಶೇಷಿಕ , ಸಾಂಖ್ಯ , ಯೋಗ , ಮಿಮಾಂಸ , ವೇದಾಂತ ಎಂಬ ಷಡ್ದರ್ಶನಗಳಿದ್ದವು ; ನಾಸ್ತಿಕವಾದವೂ ಸೇರಿದಂತೆ ಮುಖ್ಯವಾಗಿ  ಶೈವ , ವೈಷ್ನವ , ಶಾಕ್ತ , ಸೌರ , ಗಾಣಪತ್ಯ,  ಕಾಪಾಲಿಕ ಗಳಲ್ಲದೆ ಇನ್ನೂ ಅನೇಕ ಮತ ಪಂಥಗಳಿದ್ದವು . ಇವುಗಳ ವಿಚಾರಗಳು  ಸಾಂದರ್ಭಿಕವಾಗಿ ಗೀತೆಯಲ್ಲಿ ಪ್ರಸ್ತಾಪವಾಗುತ್ತವೆ . ಉಳಿದಂತೆ ಗೀತೆಯ ಇಡಿಯ ಏಳು ನೂರು ಶ್ಲೋಕಗಳಲ್ಲಿ ಯಾವುದೇ ಒಂದು ಮತ ಪಂಥದ ಪರವಾಗಿ ಒಂದೇ ಒಂದು ಮಾತೂ ಸಹ ಬರುವುದಿಲ್ಲ .  ಹಿಂದೂಗಳೆನಿಸಿಕೊಳ್ಳುವವರು ಭಗವದ್ಗೀತೆಯನ್ನು ತಮ್ಮ ಧರ್ಮಗ್ರಂಥವೆಂದುಕೊಂಡರೆ ಅದಕ್ಕೆ ಭಗವದ್ಗೀತೆ ಹೊಣೆಯಲ್ಲ . ಉದಾಹರಣೆಗೆ ಹಿಂದೂ ಎನ್ನುವವರ ನಡುವಣ ತೀವ್ರತರ ತಾತ್ವಿಕ  ವಿರೋಧಿ ಪಂಥಗಳಾದ ದ್ವೈತಿಗಳು , ಅದ್ವೈತಿಗಳು ಇಬ್ಬರೂ ಸಹ  ಗೀತೆ ತಮ್ಮ ವಾದಗಳನ್ನೇ ಎತ್ತಿ ಹಿಡಿಯುತ್ತದೆ ಎಂದು ವಾದಿಸುತ್ತಾರೆ ; ಇನ್ನು ಗೀತೆಯ ಅಧ್ಯಯನ ಮಾಡುವ ಯಾವುದೇ ಮತದ ವ್ಯಕ್ತಿ , ಗೀತೆ ತಮ್ಮ ಮತವನ್ನೇ ಎತ್ತಿ ಹಿಡಿಯುತ್ತದೆ ಎಂದುಕೊಂಡರೆ ಯಾವುದೇ ಆಶ್ಚರ್ಯವಿಲ್ಲ . 
ಇಂದಿನ ಜಗತ್ತಿನಲ್ಲಿ ಮುಂಚೂಣಿಯಲ್ಲಿರುವ ಅನೇಕ ಮತಗಳು ಭಗವದ್ಗೀತೆಯ ರಚನೆಯ ಕಾಲಕ್ಕೆ ಇನ್ನೂ ಕಣ್ಣು ಕೂಡಾ ಬಿಟ್ಟಿರಲಿಲ್ಲ . ಅಂದಮೇಲೆ ಕಾಲಮಾನದ ದೃಷ್ಟಿಯಿಂದ ಗೀತೆಯೊಡನೆ ಅವುಗಳ ಮತಗ್ರಂಥಗಳ ಬಗ್ಗೆ ಹೇಳುವುದಕ್ಕೆ ಏನೂ ಇಲ್ಲ . ಇನ್ನೊಂದು ಮುಖ್ಯ ವಿಷಯವೆಂದರೆ ಇಂದಿನ ಪ್ರಮುಖ ಮತ ಗ್ರಂಥಗಳ ವಿಚಾರಗಳಿಗೂ ,ಭಗವದ್ಗೀತೆಯ ವಿಚಾರಗಳಿಗೂ ಶೇಕಡ ೯೯ ರಷ್ಟು  ಯಾವ ಸಾಮ್ಯವೂ ಇಲ್ಲ .  ಈ ದೃಷ್ಟಿಯಿಂದ ಮತಗ್ರಂಥಗಳ ಸಾಲಿನಲ್ಲಿ ಭಗವದ್ಗೀತೆಯನ್ನು ನಿಲ್ಲಿಸುವುದು ಅಂಥ ಜಾಣತನದ ಲಕ್ಷಣವಲ್ಲ . ಜಾಗತಿಕ ವಿದ್ಯಮಾನಗಳಲ್ಲಿ ಮತಗಳೆಂಬುವು ಪರಸ್ಪರ ಬಡಿದಾಡಿಕೊಂಡು ರಕ್ತ ಹರಿಸಿ ಮನುಕುಲವನ್ನು ಪಿಡುಗಿನಂತೆ ಕಾಡತೊಡಗಿದಾಗ, ವಿಚಾರವಂತರು ಜಾತ್ಯತೀತತೆಯ ಹೊರತು ಮನುಕುಲಕ್ಕೆ ಉಳಿಗಾಲವಿಲ್ಲವೆಂದು ಪ್ರತಿಪಾದಿಸಲು ತೊಡಗುವ ಸಾವಿರಾರು ವರ್ಷಕ್ಕೆ ಮೊದಲೇ ಮತಾತೀತ ತತ್ವಗಳನ್ನು ಪ್ರತಿಪಾದಿಸಿದ ಗೀತೆಯ ಬಗ್ಗೆ  ವಿವೇಚನಾಪೂರ್ವಕವಾಗಿ  ವಿವೇಚಿಸಿದರೆ ಅದು  ಮೊತ್ತ ಮೊದಲ ಜಾತ್ಯಾತೀತ ಗ್ರಂಥವಾಗಿಬಿಡುತ್ತದೆ . ಇಲ್ಲದೆ ಹೋದರೆ ಜಾತ್ಯಾತೀತ ತತ್ವಗಳನ್ನು ಅನುಷ್ಟಾನಕ್ಕೆ ತರಲು ಹೆಣಗಿದ ಮಹಾತ್ಮ ಗಾಂಧೀಜಿಯಂತಹವರು ಮಾರ್ಗದರ್ಶನಕ್ಕೆ ಗೀತೆಯ ಮೊರೆ ಹೋಗುತ್ತಿರಲಿಲ್ಲ  . ಅಷ್ಟೇ ಅಲ್ಲ ಮನುಷ್ಯನ ಬುದ್ದಿಶಕ್ತಿಗೆ ,  ವಿವೇಚನಾಸಾಮರ್ಥ್ಯಕ್ಕೆ ಗೀತೆ ನೀಡಿದಷ್ಟು ಗೌರವವನ್ನು ಇತರ ಕಡೆ ಹುಡುಕುವುದು ಕಷ್ಟ .
ಎರಡನೆಯ ಆಪಾದನೆ ಮಾಡುವವರು  ಒಳ್ಳೆಯವರು ಮತ್ತು ಬುದ್ದಿವಂತರು  , ಆ ಬುದ್ದಿವಂತರಲ್ಲಿಯೂ ಗೀತೆಯನ್ನು ಓದುವುದಿರಲಿ ಎಂದೂ ಕಣ್ಣಿನಿಂದ ಸಹ ನೋಡದೆ ಅದನ್ನು ಟೀಕಿಸುವ ಮಹಾನುಭಾವರನ್ನು ನಾನು ನೋಡಿ ಆಶ್ಚರ್ಯಪಟ್ಟಿದ್ದೇನೆ . ಅವರ ಆಪಾದನೆ ಇಷ್ಟು . ’ ಪಾಪ ಅರ್ಜುನ ಯುದ್ದ ಬೇಡ ಎನ್ನುವಾಗ , ಈ ಕೃಷ್ಣ ಯುದ್ದ ಮಾಡು ಎಂದು ಪ್ರಚೋದಿಸುವ ಅವಶ್ಯಕತೆ ಏನಿತ್ತು ? ಎಂಬ ನ್ಯಾಯವಾದ ಪ್ರಶ್ನೆ ಅವರದು . ಹೌದು , ಯುದ್ದ ಯಾರಿಗೆ ಬೇಕು ? ಅದು ಕ್ರೌರ್ಯದ ಪರಮಾವಧಿ . ರಕ್ತದೋಕುಳಿಯ , ಮಾರಣಹೋಮದ ವಿಕೃತ ಆಟ ಅದು . ಯಾವ ವಿಚಾರವಂತನೂ ಅದನ್ನು ಸಮರ್ಥಿಸಲು ಸಾಧ್ಯವಿಲ್ಲ . ಇದೆಲ್ಲ ಸರಿಯೆ, ಆದರೆ ಸತ್ಯ ಬೇರೆಯೇ ಇದೆ ! ಮನುಷ್ಯ ಎಂಬ ಪ್ರಾಣಿ ಮೂಲತಃ ಯುದ್ದಕೋರ . ಜಗತ್ತಿನಲ್ಲಿ ಮಾನವ ಹೊರಹೊಮ್ಮಿದ ನಂತರ ಇಂದಿನ ವರೆಗೆ ಒಂದು ದಿನವಾದರೂ ಯುದ್ದ ಎಂಬುದು ಜಗತ್ತಿನ ಯಾವ ಮೂಲೆಯಲ್ಲಾದರೂ ಒಂದಲ್ಲಾ ಒಂದು ಕಡೆ ನಡೆಯದೆ ನಿಂತಿದೆಯೇ ? ಎಂಬ ಪ್ರಶ್ನೆಗೆ ಉತ್ತರ ಮಾತ್ರ ಕಷ್ಟ  . ಹಾಗಾದರೆ ಮನುಷ್ಯರಿಗೆ ಅದು ಅನಿವಾರ್ಯ ಪಿಡುಗು . ಎಂತಹ ಶಾಂತಿದೂತನೂ ದುರದೃಷ್ಟದಿಂದ ಈ ಸಾವಿನ ಆಟಕ್ಕೆ ಮುಖಾಮುಖಿಯಾಗುವ ಸಂದರ್ಭ ಬರಬಹುದು . 
ಗೀತೆ ಮಹಾಭಾರತದ ಭೀಷ್ಮಪರ್ವದಲ್ಲಿ ಯುದ್ದೋನ್ಮಾದದ ಎದುರಿನಲ್ಲಿ ಮೈದಳೆದ ವೈಚಾರಿಕ ಸರಮಾಲೆ . ಅಂದು ಎದುರಾದ ಮಹಾ ಸಂಗ್ರಾಮ ಅಂದಿನ ಆಕಸ್ಮಿಕವಲ್ಲ ಅನೇಕ ವರ್ಷಗಳ ಹಿಂದಿನಿಂದ ವ್ಯೂಹಾತ್ಮಕವಾಗಿ ರಚನೆಗೊಂಡ ಹಿಂಸಾತ್ಮಕ ರಣಕೇಳಿ ಅದು . ಅದನ್ನು ತಪ್ಪಿಸಲು ಯಾರೂ ಪ್ರಯತ್ನಿಸಲೇ ಇಲ್ಲವೆ ? ಎನ್ನುವವರು ಮಹಾ ಭಾರತದ ಇತರ ಪರ್ವಗಳ ಕಡೆಗೆ ಗಮನ ಹರಿಸಬೇಕು , ಉದ್ಯೋಗ ಪರ್ವದಲ್ಲಿ ಯುದ್ದ ನಿಲುಗಡೆಗೆ ಸಕಲ ಪ್ರಯತ್ನಗಳೂ ನಡೆಯುತ್ತವೆ . ಪಾಂಡವರಿಗೆ ದಾಯಭಾಗವಿರಲಿ ಕನಿಷ್ಟ ಐದು ಗ್ರಾಮಗಳನ್ನು ನೀಡುವಂತೆ ಮನ ಒಲಿಸುವ ಪ್ರಯತ್ನಗಳು ನಡೆಯುತ್ತವೆ ; ಫಲಕಾರಿಯಾಗುವುದಿಲ್ಲ . ವಿರಾಟಪರ್ವದಲ್ಲಿಯೇ ಪಾಂಡವರನ್ನು ನಿರ್ನಾಮಗೊಳಿಸುವ  ಉದ್ದೇಶದಿಂದ , ಮುಂದಿನ ಮಹಾಭಾರತದ ಯುದ್ದದ ಮುನ್ನುಡಿಯೆಂಬಂತೆ ಉತ್ತರ ಗೋಗ್ರಹಣದ ಯುದ್ದ ಸಂಭವಿಸುತ್ತದೆ , ಆ ಯುದ್ದವನ್ನು ಪಾಂಡವರು ಗೆಲ್ಲುತ್ತಾರೆ . ಒಂದು ಹನಿ ರಕ್ತ ಕೂಡಾ ಭೂಮಿಗೆ ಬೀಳದಂತೆ ! ಇಷ್ಟೊಂದು ಶಾಂತಿಪ್ರಿಯ ಕ್ರಮಗಳು ವ್ಯರ್ಥವಾಗುವಂತೆ ಮಹಾಭಾರತ ಯುದ್ದವೆಂಬ ಜಗತ್ತಿನ ಮೊದಲ ಮಹಾ ಸಂಗ್ರಾಮ ನಡೆದೇ ಹೋಗುತ್ತದೆ . 
ಯುದ್ದ ಮುಖಾಮುಖಿಯಾದಾಗ ಕೃಷ್ಣ ಹೇಳುವುದಾದರೂ ಏನನ್ನು ? ’ ಸಂಭಾವಿತಸ್ಯಚಾಕೀರ್ತಿರ್ಮರಣಾದತಿರಿಚ್ಯತೆ’  ಎಂಬ ಮಾತನ್ನು ಸಂಭಾವಿತನಿಗೆ ಕೀರ್ತಿನಾಶವಾಗುವುದು ಮರಣಕ್ಕಿಂತ ಹೀನವಾದುದು ಎಂದು . ನಿಮ್ಮ ಮನೆಗೆ ದರೋಡೆಕೋರರು ನುಗ್ಗಿದ್ದಾರೆ , ಹೆಂಗಸರು ಮಕ್ಕಳನ್ನು ಬಿಟ್ಟು ನೀವು ಪಲಾಯನ ಮಾಡಿದರೆ ನಿಮ್ಮ ಕುಟುಂಬದ ದೃಷ್ಟಿಯಲ್ಲಿ ನಿಮ್ಮ ಹಣೆಬರಹ ಏನಾಗುತ್ತದೆ ? ಇದೇ ಕೃಷ್ಣ ಎತ್ತುವ ಪ್ರಶ್ನೆ . ಮುಂಬಯಿಯ ಮೇಲೆ ಬಾಂಬ್ ದಾಳಿಯಾಗುತ್ತದೆ ದಾಳಿಕಾರರನ್ನು ಹಿಡಿದು ಶಿಕ್ಷಿಸಬಾರದೆ ? ಹಾಗೆ ಮಾಡದಿದ್ದಲ್ಲಿ ಅಂಥಹ ಘಟನೆಗಳು ಮರುಕಳಿಸಿ ಅರಾಜಕವಾಗುವುದಿಲ್ಲವೆ ? ಹೋಗಲಿ ಮೂರ್ಖರ ಇಂಥ ದಾಳಿಗಳಿಗೆ ಜೀವ ತೆರುವ ಅಮಾಯಕರು ಮಾಡಿದ ತಪ್ಪೇನು?  ಅವರನ್ನು ರಕ್ಷಿಸುವುದು ಆಡಳಿತದ ಹೊಣೆಯಲ್ಲವೆ ? ಇಂತಹ ಅನೇಕ ಧರ್ಮ ಸೂಕ್ಷ್ಮಗಳು ಈ ಯುದ್ದ , ಕಾಳಗ ಮುಂತಾದುವುಗಳ ಹೆಜ್ಜೆ ಹೆಜ್ಜೆಗಳಲ್ಲಿವೆ ಇವು ಭಾಷಣ ಮಾಡುವಷ್ಟು ಸುಲಭದ ವಿಚಾರಗಳಲ್ಲ . ಇಷ್ಟಕ್ಕೂ ಗೀತೆ ಕಾಲುಕೆರೆದು ಜಗಳ ಮಾಡಲು ಅಥವಾ ತಮ್ಮ ವಿಚಾರಗಳನ್ನು ಒಪ್ಪದವರನ್ನು ಕೊಂದು ಹಾಕುವಂತೆ ಎಲ್ಲಿಯೂ  ಪ್ರಚೋದಿಸುವುದಿಲ್ಲ . ಯುದ್ದ ಸನ್ನಿವೇಶದಲ್ಲಿ ಆರಂಭವಾದ ಗೀತೆ ಉದ್ದಕ್ಕೂ ಪ್ರತಿಪಾದಿಸುವುದು ಅಹಿಂಸಾತ್ಮಕ ವಾತಾವರಣವನ್ನು ಮತ್ತು ಶಾಂತಿಪ್ರಿಯತೆಯನ್ನು ತಾಳ್ಮೆಯಿಂದ ಪೂರ್ವಾಗ್ರಹಗಳಿಲ್ಲದೆ ಅಧ್ಯಯನ ಮಾಡಬೇಕು ಅಷ್ಟೆ .’ಅದ್ವೇಷ್ಟಾ ಸರ್ವಭೂತಾನಾಂ ಮೈತ್ರಃ ಕರುಣಏವ”  ಜಗತ್ತಿನ ಸಕಲ ಪ್ರಾಣಿಗಳಲ್ಲಿ ಮೈತ್ರಿ ಕರುಣೆಯನ್ನು ಬೆಳಸಿಕೊಂಡರೆ ಮನಸ್ಸಿಗೆ ಖಾಯಿಲೆಗಳಿರುವುದಿಲ್ಲ ಎನ್ನುವ ಗೀತೆ ಯಾವ ರೀತಿಯ ಕ್ರೌರ್ಯವನ್ನು ಬೋಧಿಸೀತು ? 
ಮೂರನೆಯದು ವರ್ಣಾಶ್ರಮಗಳನ್ನು ಹೇರುವ ಹುನ್ನಾರ ಎಂಬಮಾತು , ನಿಜಕ್ಕೂ ಇದೊಂದು ಹಾಸ್ಯಾಸ್ಪದ ವಿಚಾರ . ಗೀತೆಯ ರಚನೆಯ ಕಾಲಕ್ಕೆ ಭಾರತದಲ್ಲಿ ವರ್ಣಾಶ್ರಮ ವ್ಯವಸ್ಥೆ ಇದ್ದಿತು . ಆದರೆ  ಇಡೀ ಗೀತೆಯಲ್ಲಿ ವರ್ಣಾಶ್ರಮಗಳ ನೇರ ಪ್ರಸ್ತಾಪ ಬರುವುದು ಎರಡುಕಡೆ ಮಾತ್ರ , ಮೊದಲನೆಯ ಸಾರಿ ಯಾಕೆ ಯುದ್ದ ಬೇಡ ಎಂಬ ವಿಷಯಕ್ಕೆ ಅರ್ಜುನ ಕೊಡುವ ಕಾರಣಗಳಲ್ಲಿ ’ವರ್ಣಾಶ್ರಮಗಳು ಹಾಳಾಗುತ್ತವ” ಎಂಬುದು ಒಂದು , ’ವರ್ಣಾಶ್ರಮಗಳು ಹಾಳಾದರೆ ಸ್ತ್ರೀಯರು ಕೆಡುತ್ತಾರ” ಎಂಬ ಬಾಲಿಶ ಅದಾಹರಣೆಗಳು ಇದೆಲ್ಲವನ್ನೂ ಕೇಳಿ ಕೃಷ್ಣ ನಗುತ್ತಾನೆ ಅಷ್ಟೆ . ಇನ್ನೊಮ್ಮೆ ’ನಾಲ್ಕೂ ವರ್ಣಗಳೂ ನನ್ನಿಂದಲೇ ಸೃಷ್ಟಿಯಾದವು ವ್ಯಕ್ತಿಗಳ ಗುಣ ಕರ್ಮ ಸ್ವಭಾವಗಳ  ಕಾರಣದಿಂದ ” ಎಂಬ ಕೃಷ್ಣನ ಬಾಯಿಂದಲೇ ಬರುವ ಮಾತು , ವೈಜ್ಞಾನಿಕವಾಗಿ ನೇರವಾಗಿ ಅರ್ಥ ಮಾಡಿಕೊಂಡರೆ ; ಜಗತ್ತಿನ ವಸ್ತು ಸ್ಥಿತಿಯನ್ನು ವಸ್ತು ನಿಷ್ಟವಾಗಿ ಗ್ರಹಿಸಿದರೆ  ಕೃಷ್ಣನ ಈ ಮಾತುಗಳ ಹಿಂದಿನ ಸತ್ಯ ಅರ್ಥವಾಗುತ್ತದೆ . ಇನ್ನೆಲ್ಲಿಯೂ ಗೀತೆಯಲ್ಲಿ ಈ ವಿಷಯವಿಲ್ಲ ; ವರ್ಣಾಶ್ರಮಗಳ ಸಮರ್ಥನೆಯಂತೂ ಮೊದಲೇ ಇಲ್ಲ . ಅದು ಹೇಳುವುದು ಸಕಲ ಮಾನವರೂ ಜ್ಞಾನಿಯ ದೃಷ್ಟಿಯಲ್ಲಿ ಸಮಾನರು ಎಂಬ ಮಾತನ್ನು ಮಾನವರು ಮಾತ್ರವಲ್ಲ ಪ್ರಾಣಿಗಳೂ ಸಹ . ಆದುದರಿಂದ ಈ ಭೂಮಿಯ ಸಕಲ ಜೀವ ಜಾತವನ್ನೂ ಮನುಷ್ಯ ಪ್ರೀತಿಸಬೇಕು ಎನ್ನುವ ಘೋಷ ವಾಕ್ಯಗಳನ್ನು 
ಹಾಗಾದರೆ ಗೀತೆಯಲ್ಲಿ ಪ್ರತಿಪಾದಿತವಾಗಿರುವ ವಿಷಯವಾದರೂ ಯಾವುದು ? ಗೀತೆಯ ಕನಿಷ್ಟ ಐನೂರು ಶ್ಲೋಕಗಳಲ್ಲಿ ಬರುವುದು ಮನುಷ್ಯನ ಚಿತ್ರ ವಿಚಿತ್ರ ಸ್ವಭಾವದ ಬಗ್ಗೆ ; ಅವನ ಮನಸ್ಸು ಚಿಂತಿಸುವ , ಆಶಿಸುವ ಪ್ರಲೋಭನೆಗಳಿಗೆ ಒಳಗಾಗುವ ರೀತಿಯ ಬಗ್ಗೆ ; ಅದರಿಂದಾಗಿ ಕ್ಷೋಭೆಗೊಳಗಾಗುವ ಬಗ್ಗೆ  ಮತ್ತು ಮನಸ್ಸು ದಾರಿ ತಪ್ಪಿದಾಗ ಅದನ್ನು ನಿಯಂತ್ರಿಸುವ ಉಪಾಯಗಳ ಬಗ್ಗೆ . ಹಿಗಾಗಿ ಮೊದಲನೆಯದಾಗಿ  ಗೀತೆ ಒಂದು ವೈಜ್ಞಾನಿಕ ಮನಃಶಾಸ್ತ್ರೀಯ ಗ್ರಂಥ , ತದನಂತರ ಒಂದು ತತ್ವ ಜಿಜ್ಞಾಸೆಯ ಗ್ರಂಥ ; ಮನುಷ್ಯನ ಸ್ವಾತಂತ್ರ್ಯ, ಅಭಿವ್ಯಕ್ತಿಗಳಿಗೆ ಒತ್ತು ಕೊಡುವ ಗ್ರಂಥ . ಆಧುನಿಕ  ನಾಗರಿಕ ಜಗತ್ತು ಈ ವಿಷಯಗಳನ್ನು ಪ್ರತಿಪಾದಿಸುವ ಸಾವಿರಾರು ವರ್ಷಗಳ ಹಿಂದೆಯೇ ಆಶ್ಚರ್ಯವೆನ್ನುವಂತೆ ಈ ವಿಷಯಗಳೆಲ್ಲ ಗೀತೆಯಲ್ಲಿ ಪ್ರತಿಪಾದಿತವಾಗಿವೆ . ಗೀತೆಯೇ ಹೇಳುವಂತೆ ಎಲ್ಲರಿಗೂ ಗೀತೆಯನ್ನು ವಿಮರ್ಶಿಸಿ ಟೀಕಿಸುವ ಹಕ್ಕಿದೆ . ಆ ಹಕ್ಕನ್ನು ನಾವು ದುರುಪಯೋಗಪಡಿಸಿಕೊಳ್ಳದೆ , ಅಧ್ಯಯನ ಮಾಡಿ ನಂತರ ಟೀಕಿಸುವ ವಿಮರ್ಶಿಸುವ ಹಕ್ಕನ್ನು ಚಲಾಯಿಸುವುದು ಉತ್ತಮ
*********************************

ಬುಧವಾರ, ಜುಲೈ 20, 2011

ಯಾವದೇಶದಲ್ಲಿ ಜಾಗ ಇದೆ?

ಭಗವದ್ಗೀತೆ ಅಭಿಯಾನವನ್ನು ವಿರೋಧಿಸುವವರು ದೇಶ ಬಿಟ್ಟು ಹೋಗಲಿ
ಕಾಗೇರಿ ಯವರು ಹೇಳಿದ ಮಾತು ಕೇಳಿದರೆ, ಇವರನ್ನು ಯಾವ ದೇಶದವರು ರತ್ನ ಗಂಬಳಿ ಹಾಸಿ ಇವರನ್ನು ಬರಮಾಡಿಕೊಳ್ಳುತ್ತಾರೆ ? ಇಂತಹ ನಕಲಿ ಜಾತ್ಯಾತೀತ ಜನರಿಗೆ ನಮ್ಮ ದೇಶ ಬಿಟ್ರೆ ಬೇರೆಲ್ಲೂ ಜಾಗ ಇಲ್ಲ.  ನಮ್ಮ ದೇಶ ದಲ್ಲಿ ದೇಶದ್ರೋಹಿಗಳಿಗೂ ಜಾಗ ಇದೆ. ರಾಷ್ಟ್ರಗೀತೆ ಗೆ ಅಪಮಾನ ಮಾಡಿದವರಿಗೂ ಜಾಗ ಇದೆ. ರಾಷ್ಟ್ರಧ್ವಜ ಸುಟ್ಟವರಿಗೂ ಜಾಗ ಇದೆ. ಸಂಸತ್ತಿಗೆ ದಾಳಿ ಮಾಡಿದವರಿಗೂ ಜಾಗ ಇದೆ. ಎಲ್ಲರಿಗೂ ಜಾಗ ಇದೆ.ಅಂತ ಉದಾರಿ ದೇಶ ನಮ್ಮದು.

ಕಳೆದ ನಾಲ್ಕ ವರ್ಷಗಳಿಂದ ಸೊಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನದ ಸ್ವಾಮಿಗಳು ಮಕ್ಕಳಿಗೆ ಭಗವದ್ಗೀತೆ ಪಠಣದ ಬಗ್ಗೆ ಜ್ಞಾನ ಮೂಡಿಸುತ್ತಿದ್ದಾರೆ ಸರ್ಕಾರ ಸಹ ಗೀತಾಧ್ಯಯನ ಯೋಜನೆ ಗೆ ಪ್ರೋತ್ಸಾಹ ನೀಡಿ  ಶಾಲೆಗಳಲ್ಲಿ ಜಾರಿಗೆ ತಂದಿದ್ದಾರೆ. ಯಾರಿಗೆ ಕಲಿಯಬೇಕು ಅಂತ ಇಷ್ಟ ಇದೆಯೋ ಅವರಿಗೆ ಕಲಿಯಲು ಅಡ್ಡಿಯೇನಿಲ್ಲ, ಹಾಗು ಕಲಿಯಲೇ ಬೇಕು ಅಂತ ಒತ್ತಡವೇನಿಲ್ಲ. ಆದರೆ ವಿರೋಧದ ಹೆಸರಿನಲ್ಲಿ ಭಗವದ್ಗೀತೆಯನ್ನು ಹರಿದಿರುವುದು ಅಕ್ಷಮ್ಯ,  ನಮ್ಮ ಧರ್ಮದಲ್ಲಿರುವ ಸ್ವಾತಂತ್ರ್ಯದಿಂದ ಇಂದು ಇವರು ಸಾಯದೆ ಬದುಕಿದ್ದಾರೆ. ಆದರೆ ಇದೇ ಧೈರ್ಯದಿಂದ ಒಂದು ವೇಳೆ ಬೇರೆ ಧರ್ಮದ ಪುಸ್ತಕಗಳನ್ನು ಹರಿದಿದ್ದರೆ ಅವರು ಜೀವಂತ ವಾಗಿರುತಿದ್ದರೆ?

ನನ್ನ ಸ್ನೇಹಿತನೋರ್ವ ಹೇಳುತಿದ್ದ ಮಾತುಗಳು " ಕೆಲ ದಶಕ ಗಳಿಂದ ರಾಜ್ಯದ ಹಾಗು ಹೊರ ರಾಜ್ಯದ ದೇವಸ್ಥಾನಗಳಿಗೆ ಹೋದಾಗ ನಾನು ಗಮನಿಸುತಿದ್ದುದು ಅಲ್ಲಿ ನಡೆಯುತಿದ್ದ ವೇದ ಹಾಗು ಸಂಸ್ಕೃತ ಪಾಠಶಾಲೆಗಳು. ಯಾಕೆಂದರೆ ಹಿಂದುಳಿದ ಜನಾಂಗದಲ್ಲಿ ಹುಟ್ಟಿದ ನನಗೆ ಬ್ರಾಹ್ಮಣ ವಿಧ್ಯಾರ್ಥಿಗಳು ಕಲಿಯುತಿದ್ದ ಹಾಗು ಅಲ್ಲಿನ ವಾತವರಣ ನನಗೆ ಬಹು ಅಚ್ಚರಿಯನ್ನು ಮೂಡಿಸುತಿತ್ತು. ನಮಗೆ ಯಾಕೆ ಇಂತಹ ಸೌಲಭ್ಯ ಸಿಗ್ತಾಯಿಲ್ಲ, ನಮ್ಮ ಮನೆಯಲ್ಲಿ ಯಾಕೆ ವೇದಾಧ್ಯನ ಹಾಗು ಪೂಜೆ ಕಾರ್ಯಗಳು ಅವರು ಮಾಡಿದ ರೀತಿಯಲ್ಲಿ ಯಾಕೆ ನಡೆಯುತಿಲ್ಲ ಅಂತ ಬೇಸರವಾಗುತಿತ್ತು. ಇಂದು ಕಾಲ ಬದಲಾಗಿದೆ, ಸದ್ಯದ ಪರಿಸ್ಥಿತಿ ಯಲ್ಲಿ ಎಲ್ಲವು ಕೈಗೆ ಎಟುಕುತ್ತಿದೆ, ಎಲ್ಲ ರೀತಿಯ ಕಾರ್ಯ ವಿಧಾನ ಗಳು ಮುದ್ರಿತ ರೂಪದಲ್ಲೂ ಹಾಗು ವೀಡಿಯೋ ಗಳ ಮುಖಾಂತರ ಇಂದು ದೊರೆಯುತ್ತಿವೆ. ನಿಜವಾಗ್ಯೂ ಆಚಾರ ವಿಚಾರಗಳಲ್ಲಿ ಶ್ರದ್ಧೆ ಭಕ್ತಿಯಿದ್ದರೆ ಕಲಿಯುವುದು ದೊಡ್ಡದೇನಿಲ್ಲ, ಮನಸ್ಸು ಮಾತ್ರ ದೊಡ್ಡದಾಗಿದ್ದರೆ ಸಾಕು."




ಅಷ್ಟಕ್ಕೂ ಭಗವದ್ಗೀತೆ ಯಲ್ಲೇನಿದೆ? ಅಲ್ಲಿ ಜೀವನದ ವಿಧಾನ ಹಾಗು ಬದುಕುವ ಕಲೆಯ ಬಗ್ಗೆ ವಿವರಣೆಯಿದೆ ಹೊರತು ಧರ್ಮ ಭೋದನೆ ಯಿಲ್ಲ. ಪಾಶ್ಚ್ಯಾತ್ಯರು ಸಹಿತ ಗೀತೆಯಲ್ಲಿನ ಸಾರ ಕ್ಕೆ ಮಾರುಹೋಗಿದ್ದಾರೆ. ಕಾರ್ಪೊರೇಟ್ ಸಂಸ್ಥೆಗಳಲ್ಲಿ ಸಹ ವ್ಯಕ್ತಿತ್ವ ವಿಕಸನ ಕ್ಕಾಗಿ ಗೀತೆಯ ಕೆಲ ಅಧ್ಯಾಯಗಳನ್ನು ಆಯ್ದುಕೊಂಡು ಭೋದಿಸುತಿದ್ದಾರೆ. ವಿದ್ಯಾರ್ಥಿಗಳಿಗೆ ಜೀವನ ಪದ್ದತಿಯನ್ನು ಭೋಧಿಸುವ ಉದ್ದೇಶದಿಂದ ಶಾಲಾ-ಕಾಲೇಜುಗಳಲ್ಲಿ ಭಗವಧ್ಗೀತೆ ಅಭಿಯಾನವನ್ನು ನಡೆಸಲು ಉದ್ದೇಶಿಸಿದೆ ಹೀಗಿರುವಾಗ ಗೀತೆಯ ಭೋದನೆಗೆ ಇರುವ ವಿರೋಧ ಕೇವಲ ರಾಜಕೀಯ ಹೊರತು ಬೇರೆನಿಲ್ಲ. ಅಂದು ಗಾಂಧಿ ಸಹ ಬಹು ಮೆಚ್ಚಿದ್ದ ವಿಚಾರಧಾರೆ ಗಳು ಇಂದು ಜನಕ್ಕೆ ಬೇಡವಾಗಿವೆ.
ಅಂದು ದೊರೆಯದಿದ್ದ ಆಚಾರ ವಿಚಾರ ಗಳು ಶಿಕ್ಷಣ ಇಂದು ನಮಗೆ ದೊರೆಯುತ್ತಿರುವಾಗ ವಿರೋಧಿಸುವುದು ಮೂರ್ಖತನದ ಪರಮಾವಧಿ.

ಒಬ್ಬ ಮುಸಲ್ಮಾನ ನಾಗಿ ಹುಟ್ಟಿದರೆ, ಕುರಾನ್ ಪಠಣ ದಿಂದ ಮದರಸದಲ್ಲಿ ಶಿಕ್ಷಣ ಶುರುವಾಗುತ್ತೆ. ಬೈಬಲ್ ಓದದ ಹಾಗು ಕೇಳದ ಕ್ರಿಶ್ಚಿಯನ್ ಇರಲಾರ ಹಾಗು ಗ್ರಂಥ ಸಾಹೇಬ ಓದದ ಸಿಖ್ ಧರ್ಮೀಯ ಸಹ ಇರಲಾರ. ಆದರೆ  ಸರಿಯಾದ ಧಾರ್ಮಿಕಆಚರಣೆ ವಿಧಾನ ಹಾಗು ಆಧ್ಯಾತ್ಮ ಶಿಕ್ಷಣ ದೊರೆಯದೆ ಇರುವ ಕೋಟ್ಯಾಂತರ ಹಿಂದುಗಳು ಸಿಗುವುದು ಸಹಜ. ಕಾರಣ ಧರ್ಮದಲ್ಲಿರುವ ಸಂಪೂರ್ಣ ಸ್ವಾತಂತ್ರ್ಯ. ಯಾವುದೇ ಕಟ್ಟುಪಾಡು ಗಳು ನೀತಿ ನಿಯಮಗಳು, ಹೀಗೆ ಆಚರಣೆ ಮಾಡಬೇಕು ಎನ್ನುವ ಮಾತುಗಳು ಹಿಂದು ಧರ್ಮದಲ್ಲಿ ಎಲ್ಲಿ ಸಹ ನಮೂದಾಗಿಲ್ಲ. ಇದೆಲ್ಲದರ ಪರಿಣಾಮ ಇಂದು ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅನಾಚಾರ, ಕೊಲೆ,  ಸುಲಿಗೆ, ಮೋಸ, ದಗಾ, ವಂಚನೆ,  ದರೋಡೆ ಅನೈತಿಕ ಚಟುವಟಿಕೆ ಗಳು ಇನ್ನು ಮುಂತಾದ ಸಮಾಜ ಬಾಹಿರ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿವೆ. ಕಾರಣ  ಜನರಲ್ಲಿ ಯಾವುದೇ ರೀತಿಯ ಭಯ ಭಕ್ತಿ ಇಲ್ಲ. ಇರುವ ಅಲ್ಪ ಸ್ವಲ್ಪ ಅರಿವು ಸಹ ನಶಿಸುತ್ತಿದೆ. ಸಮಾಜವನ್ನು ಒಂದುಗೂಡಿಸುವ ಕೆಲಸವನ್ನು ಯಾರು ಸಹ ಮಾಡುತ್ತಿಲ್ಲ. ಆಧ್ಯಾತ್ಮಿಕ ಚಿಂತನೆ ಹಾಗು ಧರ್ಮದ ಅರಿವು ಜನರಲ್ಲಿ ಸ್ವಲ್ಪ ಮಟ್ಟಿಗೆ ಆದರು ಸುಧಾರಣೆ ತಾರದೆ ಇರದು.
ಅರಬ್ ರಾಷ್ಟ್ರಗಳಾದ ದುಬೈ, ಅಬುಧಾಬಿ, ಕತಾರ್, ಮಸ್ಕತ್, ಬಹ್ರೈನ್ ಗಳಲ್ಲಿ ಅತ್ಯಂತ ಧಾರ್ಮಿಕ ಶ್ರದ್ದೆಯ ಪರಿಣಾಮ ದಿಂದ ಜನ ಶಾಂತಿ ಸಹಬಾಳ್ವೆಯಿಂದ ಜೀವನ ನಡೆಸುತಿದ್ದಾರೆ. ಕಾರಣ ಅವರಿಗಿರುವ ಧರ್ಮದ ಅರಿವು. ಅಲ್ಲಿ ಕೊಲೆ ಸುಲಿಗೆ, ಮೋಸ, ದಗಾ ವಂಚನೆ ತುಂಬಾ ಕಡಿಮೆ.
ದೊಡ್ಡವರು ಹೇಳಿದ ಹಾಗೆ ಒಳ್ಳೆಯ ವಿಷಯ ಜಗದ ಯಾವುದೇ ಮೂಲೆಯಿಂದ ಬಂದರೂ ನಮ್ಮ ಕಿವಿ ಹಾಗು ಮನಸ್ಸು ಗಳನ್ನು ತೆರೆದು ಆಹ್ವಾನಿಸ ಬೇಕು. ಅದು ಕುರಾನ್ ಆಗಿರಲಿ, ಬೈಬಲ್ ಆಗಿರಲಿ ಅಥವ ಭಗವದ್ಗೀತೆ ಆಗಿರಲಿ ತಿಳಿದು ಕೊಳುವುದರಲ್ಲಿ ತಪ್ಪೇನಿದೆ?