ಗುರುವಾರ, ಆಗಸ್ಟ್ 25, 2011

ಭ್ರಷ್ಟ ಪತ್ರಕರ್ತರ ನೈತಿಕತೆ?



ಗಣಿ ವರದಿಯಲ್ಲಿ ಉಲ್ಲೇಖವಾಗಿರುವ ಪತ್ರಕರ್ತರ ಬಗ್ಗೆ ಯಾವುದೇ ಚರ್ಚೆ ನಡೆಯದೇ ವಿಷಯವನ್ನು ಬೇರೆ ಕಡೆ ಕೇಂದ್ರೀಕರಿಸಿರುವ ಮಾಧ್ಯಮಗಳ ದ್ವಂದ್ವ ನಿಲುವಿನ ಬಗ್ಗೇ ಏನನ್ನಬೇಕು?   ಯಾರೇ ಭ್ರಷ್ಟಾಚಾರ ಮಾಡಿದರು ಅಥವ ಅಂತಹ ಸಣ್ಣ ಕ್ಲೂ ದೊರೆತ ತಕ್ಷಣ ಮಾಧ್ಯಮಗಳಲ್ಲಿ ರಂಜನೀಯವರದಿಯನ್ನು ಕಾಣಬಹುದು. ಆದರೆ ಆಗಸ್ಟ್ ೧೯ ರಂದು ಪ್ರಜಾವಾಣಿಯಲ್ಲಿ ಪ್ರಕಟವಾದದ್ದು ಬಿಟ್ಟರೆ ಹೆಚ್ಚಿನ ಕಡೆ ಮತ್ತೆ ಅಂತಹ ಪ್ರಸ್ತಾಪ ವಾಗಲಿಲ್ಲ.

ಕಾಂಗ್ರೆಸ್ಸಿನ ಮುಖಂಡರಾದ ಉಗ್ರಪ್ಪ ನವರು ವರದಿಯಲ್ಲಿ ಉಲ್ಲೇಖವಾದ ಎಲ್ಲ ಪತ್ರಕರ್ತರ ವಿರುದ್ದ ಯಾವುದೇ ಮುಲಾಜೂ ನೋಡದೆ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪತ್ರಕರ್ತರು ಸಮಾಜದ ಕಾವಲುಗಾರರಿದ್ದಂತೆ. ಸಮಾಜದ ಅಂಕು ಡೊಂಕು ತಿದ್ದಬೇಕಿರುವ ಪತ್ರಿಕೋದ್ಯಮಕ್ಕೂ ಭ್ರಷ್ಟಾಚಾರದ ಕಳಂಕ
ತಟ್ಟಿರುವುದು ವಿಷಾದನೀಯ ಎಂದರು. ಬೇರೆಯವರು ತಪ್ಪು ಮಾಡಿದ್ದರೆ ಸುಮ್ಮನೆ ಬಿಡುತ್ತಿದ್ದಿರೇನು ಎಂಬ ಪ್ರಶ್ನೆಯನ್ನೂ ಸಹ ಎಸೆಯಲು ಉಗ್ರಪ್ಪ ಮರೆಯಲಿಲ್ಲ
 ಈ ಸುದ್ದಿಗೆ ಎಷ್ಟು ಪ್ರಾಮುಖ್ಯತೆ ಕೊಡ್ತಾರೋ ಎಂಬುದು ನಮ್ಮ ಮಾಧ್ಯಮ ಮಿತ್ರರಿಗೆ ಬಿಟ್ಟ ವಿಷಯ.
ಪತ್ರಕರ್ತರೇ ಭ್ರಷ್ಟರಾದರೆ ಮತ್ತೆ ನಾವು ಯಾರನ್ನು ನಂಬಬೇಕು? ಇವರು ಮಾಡುವ ವರದಿಗಳನ್ನು ಎಷ್ಟು ನಿಜ ಎಂದು ನಾವು ನಂಬಬೇಕು?  ಬೇರೆಯವರ ಅವ್ಯವಹಾರವನ್ನು ಬಯಲಿಗೆಳೆದು ಪ್ರಪಂಚಕ್ಕೆಲ್ಲ ತೋರಿಸುವ ಇವರು ತಮ್ಮ ಮೇಲೆ ಬಿದ್ದಿರುವ ಅಪವಾದಕ್ಕೆ ಸುಮ್ಮನೆ ಯಾಕೆ ಕುಳಿತಿದ್ದಾರೆ? ಅಕ್ರಮ ಗಣಿ ವ್ಯವಹಾರದ ಬಗ್ಗೆ ಗಂಟೆಗಟ್ಟಲೇ ಕಾರ್ಯಕ್ರಮ ಮಾಡಿ ಟೀವಿಗಳಲ್ಲಿ ಬಿತ್ತರಿಸುವ ಈ ಜನ ತಮ್ಮ ಮನೆ ಮುಂದೆ ಬಿದ್ದಿರುವ ಹೇಸಿಗೆ ಬಗ್ಗೆ ಯಾಕೆ ಚಕಾರ ವೆತ್ತುತ್ತಿಲ್ಲ?
ಈ ಜನರನ್ನು ನಾವು ಪತ್ರಕರ್ತರು ಅನ್ನುವ ಬದಲು ಮಿನಿ ರಾಜಕಾರಣಿಗಳು ಅನ್ನಬಹುದೇನೋ, ರಾಜಕಾರಣಿಗಳಿಗಿಂತ ಅವರೇನು ಕಮ್ಮಿಯಿಲ್ಲ ಎನ್ನುವಂತೆ ಭ್ರಷ್ಟರಾಗಿದ್ದಾರೆ.
ಮಾಧ್ಯಮ ರಂಗ ಇಂದು ಒಂದು ಉದ್ಯಮ ವಾಗಿ ಪರಿವರ್ತನೆಯಾಗಿದೆ  ಆದರೆ ಸಂವಿಧಾನದ ನಾಲ್ಕನೇ ಅಂಗ ಎಂದು ಗುರುತಿಸಲ್ಪಟ್ಟಿರುವ, ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನ ಮಾನ ಹೊಂದಿರುವ ಮಾಧ್ಯಮ ಕ್ಷೇತ್ರದಲ್ಲೂ ಈ ರೀತಿಯ ಕೆಟ್ಟ ಚಾಳಿ ಅಂಟಿರುವುದು, ವ್ಯಾಪಿಸುತ್ತಿರುವುದು ಮಾತ್ರ ಸರಿಯಲ್ಲ

ಇನ್ನು ಸಚಿವೆ ಶೋಭಾ ಕರಂದ್ಲಾಜೆ ಯವರು ತಮ್ಮ ಬಗ್ಗೆ ಟೀವಿ ಯಲ್ಲಿ ಹಾಗು ಪತ್ರಿಕೆ ಗಳಲ್ಲಿ ಅವರ ಚಾರಿತ್ರ್ಯ ವಧೆ ಮಾಡುವಂತಹ ಕಾರ್ಯ ನಡೆಯುತ್ತಾ ಇದೆ, ಸುದ್ದಿಯ ಸತ್ಯಾಸತ್ಯತೆ ಯನ್ನು ಪರಿಗಣಿಸದೆ ಜನರ ಮುಂದೆ ನನ್ನನ್ನು ಅಪರಾಧಿ ಎಂಬಂತೆ ಬಿಂಬಿಸುತಿದ್ದಾರೆ ಎಂದು ಅವಲತ್ತು ಕೊಂಡಿದ್ದಾರೆ. ನಾನು ತಪ್ಪು ಮಾಡಿದ್ದರೆ ನನಗೆ ಶಿಕ್ಷೆ ಯಾಗಲಿ ಎಂದು ಮಾಧ್ಯಮದ ಮುಂದೆ ಇಂದು ಸಚಿವೆ ಶೋಭಾ ಕರಂದ್ಲಾಜೆ  ಹೇಳಿದ್ದಾರೆ, ತಾವು ಮಾಡಿದ ಸಾಮಾಜಿಕ ಕಾರ್ಯಗಳ ಬಗ್ಗೆ ಮಾತನಾಡದೆ ಇಂತಹ ಸುಳ್ಳು ಸುದ್ದಿಗಳನ್ನು ಯಾವ ಪುರುಷಾರ್ಥಕ್ಕಾಗಿ ಜನರಮುಂದೆ ಹೇಳುತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಆನೆ ನಡೆದಿದ್ದೇ ದಾರಿ ಎಂಬಂತೆ ಇವರು ಬರೆದಿದ್ದೇ ವೇದವಾಕ್ಯ, ಇವರು ತೋರಿಸಿದ್ದೇ ನಿಜ ಎನ್ನುವುದನ್ನು ಇನ್ನು ಮುಂದೆ ನಾವು ನಂಬದೇ ಇರುವ ಪರಿಸ್ಥಿತಿ ಯನ್ನು ನಮ್ಮ ಮಾಧ್ಯಮದ ಮಂದಿ ಮಾಡಿದ್ದಾರೆ. ಮಾಧ್ಯಮಗಳಲ್ಲಿರುವ ಪೀತ ಪತ್ರಕರ್ತರ ಬಗ್ಗೆ  ಬಗ್ಗೆ ಮುಂಚೆಯಿಂದಲೂ ಒಂದು ಆರೋಪವಿದ್ದದ್ದೆ, ದುಡ್ಡು ಕೊಟ್ಟರೆ ಒಳ್ಳೆಯದನ್ನು ಬರೆಯುತ್ತಾರೆ, ಇಲ್ಲದೇ ಇದ್ದರೆ ಚಾರಿತ್ರ್ಯ ವಧೆ ಮಾಡುತ್ತಾರೆ ಅಂತ. ಇನ್ನೂ ಕೆಲವರಿದ್ದಾರೆ, ಅವರ ಮೂಗಿನ ನೇರಕ್ಕೆ ಸರ್ಕಾರ ನಡೆಯಬೇಕು ಹಾಗು ಇಂತಹವರೇ ಮು.ಮಂ ಆಗಬೇಕು ಎಂದು ಠರಾವು ಹೊರಡಿಸುವ ಮಂದಿ.
ರಾಜಕಾರಣಿಗಳ ನೈತಿಕತೆಯನ್ನು ಪ್ರಶ್ನಿಸುವ ಈ ಮಂದಿ ಮೊದಲು ತಮ್ಮ ನೈತಿಕತೆಯನ್ನು ಸಾಬೀತು ಪಡಿಸಲಿ. ವಿಷಾದ ದ ಸಂಗತಿಯೆಂದರೆ, ಅಣ್ಣಾ ಹೋರಾಟಕ್ಕೆ ಇಂತಹ ಭ್ರಷ್ಟ ಜನರೇ ಕೈ ಜೋಡಿಸಿ ಭರ್ಜರಿ ಪ್ರಚಾರ ಕೊಡುತ್ತಿರುವುದು. ಇದು ನಮ್ಮೆಲ್ಲರ ಧೌರ್ಭಾಗ್ಯ.
ಜವಬ್ದಾರಿಯುತ ಪತ್ರಿಕೆಗಳು ಹಾಗು ವ್ಯಕ್ತಿಗಳು ಹೀಗೆ ಬೇಜವ್ಬ್ದಾರಿಯಿಂದ ಸುದ್ದಿಯನ್ನು ಪ್ರಕಟಿಸುವುದು ಎಷ್ಟು ಸರಿ? ಎಂದು ನಾವು ಈ ಬಗ್ಗೆ ಪ್ರಶ್ನಿಸಿದ್ದೆವು.
ಕುವೈತ್ ನಲ್ಲಿರುವ ಇನ್ಫೋಸಿಸ್ ಕಟ್ಟಡ ಎಂದು ಇಲ್ಲದೇ ಇರುವ ಕಟ್ಟಡ ವನ್ನು ತೋರಿಸಿದ್ದರು, ಇಂತಹದ್ದೇ ಬಹುತೇಕ ಎಡವಟ್ಟು ಗಳು ಪತ್ರಿಕೆಯಲ್ಲಿ ಕಂಡು ಬಂದರೂ ಸಹ ಕಂಡೂ ಕಾಣದೆ ಇದ್ದಾರೆ ಈ ಜನ.
ಮದನಾರಿ ಕಾರ್ಯಕ್ರಮ ಬೇಡ ಎಂದು ಈ ಮುಂಚೆ ಬರೆದಿದ್ದೆವು, ಆದರೆ ಆ ಕಾರ್ಯಕ್ರಮವನ್ನು ಯಾವುದೇ ಬದಲಾವಣೆ ಮಾಡದೆ ಹಸಿಬಿಸಿ ದೃಶ್ಯಾವಳಿಗಳನ್ನು ಮತ್ತೆ ಮತ್ತೆ ಬಿತ್ತರಿಸಲಾಗುತ್ತಿದೆ.
೨೫.೦೮.೨೦೧೧ ರ ಕನ್ನಡಪ್ರಭ ಪುಟ ೪ ರಲ್ಲಿ ರುವ ಒಂದು ತಲೆ ಬರಹ, ಮಸೂದೆ ಅಡಿಯಲ್ಲಿ ಎನ್ನುವ ಬದಲು "ಮಸೂದೆ ಅಡಿಗೆ " ಎನ್ನುವ ಆಡುಭಾಷೆ ಬಳಸಲಾಗಿದೆ. ನೋಡ್ತಾ ಯಿರಿ ಏನೇನ್ ಮಾಡ್ತಾರೆ ಅಂತ.

2 ಕಾಮೆಂಟ್‌ಗಳು:

  1. ಗೆಳೆಯರೇ,
    ನಮ್ಮ ವ್ಯವಸ್ಥೆಯ ಬಗ್ಗೆ ನಮಗೇ ಹೇಸಿಗೆಯಾಗುತ್ತಿದೆ. ಯಾರಲ್ಲಿ ಹೇಳಿಕೊಳ್ಳೋದು. ಒಂದು ಕಡೆ ಶಾಸಕಾಂಗ, ಕಾರ್ಯಾಂಗ ಇವುಗಳಿಗೆ ಭಿನ್ನವಾಗಿ ಅವರ ಹುಳಿಕು ತೆಗೆಯುವ ಕೆಲಸ ಮಾಡುವ ಪತ್ರಿಕೋದ್ಯಮವೇ ಭ್ರಷ್ಟವಾಗುತ್ತಿದೆ. ಇದರ ಅರಿವು ಇರಲಿಲ್ಲ. ಅನುಭವಕ್ಕೆ ಬಂದಾಗ ಅದರ ಸತ್ಯ ತಿಳಿಯುತ್ತಾ ಹೋಯ್ತು. ಇಲ್ಲಿ ಎಲ್ಲಾ ಸ್ವಾರ್ಥ. ತಾನು ತನ್ನ ಮನೆ ತಮ್ಮವರು ಚೆನ್ನಾಗಿರಬೇಕು. ಮೌಲ್ಯಗಳು, ನೈತಿಕತೆಯನ್ನು ಬದಿಗೊತ್ತಿ ಹಣ ಮಾಡುವ ಒಂದೇ ಕಾಯಕ ಮಾಡಿಕೊಂಡಿದ್ದಾರೆ. ಯಾರನ್ನು ನಂಬುವುದು????????????

    ಪ್ರತ್ಯುತ್ತರಅಳಿಸಿ
  2. ಇಂದಿನದಿನಗಳಲ್ಲಿ ಮುಖ್ಯವಾಗಿ ಚರ್ಚಿಸಬೇಕಾದ ಅಗತ್ಯದ ವಿಚಾರವನ್ನೇ ಕೈಗೆತ್ತಿಕೊಂಡು ಪ್ರಕಟಿಸಿದುದಕ್ಕೆ Thanks ಸಚಿನ್ ರವರೇ... ಇಂದು ಪತ್ರಿಕೆ ಓದುವುದೆಂದರೆ ಕೇವಲ ಮನರಂಜನೆಗಾಗಿಯೇನೋ ಎನಿಸಿದರೆ ಆಶ್ಚರ್ಯವಾಗದು. ಯಾಕೆಂದರೆ ನಿಜವಾದ ಸತ್ಯ ಸಂಗತಿಯ ಸುದ್ದಿ ಓದುಗರಿಗೆ ಪತ್ರಿಕೆಗಳ ಮೂಲಕ ಲಭಿಸುವುದು ಅಲ್ಲೋ ಇಲ್ಲೋ ಎಂಬಂತೆ ಅಪರೂಪಕ್ಕೆ ಮಾತ್ರ. ಇಂದಿನ ಯಾವುದೇ ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟವಾಗಿಸಬೇಕಾಗಿರುವ ಸುದ್ದಿಯನ್ನೊಳಗೊಂಡ ಕವರ್ ನೊಂದಿಗೆ "ಇನ್ನೊಂದು ಕವರ್" ಕೂಡಾ ಇರುತ್ತದೆ. ಆ ಇನ್ನೊಂದು ಕವರ್ ನ ಭಾರ ಅದೆಷ್ಟಿಸಿರುತ್ತದೆ ಎಂಬುದನ್ನು ಅನುಸರಿಸಿ ಆ ಪತ್ರಿಕಾಗೋಷ್ಠಿಯಲ್ಲಿ ನಡೆದ ವಿಷಯ ಪ್ರಕಟವಾಗುತ್ತದೆ. ಇದು ಸತ್ಯವಿಷಯ. ಅಂದರೆ ಪತ್ರಿಕಾಗೋಷ್ಠಿಯಲ್ಲಿ ಪತ್ರಿಕಾಕರ್ತರು ಕೇವಲ ನಾಮಕಾವಸ್ತೆ ಮಾತ್ರ. ಪತ್ರಿಕೆಯಲ್ಲಿ ಏನು ಬರೆಯಬೇಕು ಎಂಬುದನ್ನು ಪತ್ರಿಕಾಗೋಷ್ಠಿ ಏರ್ಪಡಿಸಿರುವವರು ಮೊದಲೇ ನಿರ್ಧರಿಸಿ ಬರೆದು ಕವರಿನಲ್ಲಿ ಹಾಕಿ ಭದ್ರವಾಗಿ ಇಟ್ಟಿರುತ್ತಾರೆ. ಗೋಷ್ಟಿಯ ನಂತರ ಪತ್ರಕರ್ತರುಗಳಿಗೆ ಬಾರ್ ಊಟದೊಂದಿಗೆ ಗುಂಡು ಕಾಗೂ ವಿಶೇಷ ಕವರ್ ದೊರೆತರೆ ಸಾಕು. ಸುದ್ದಿ "ಕವರ್" ಆಗಿಬಿಡುತ್ತದೆ.

    ನಮಗೆ ತಿಳಿದಿರುವಂತೆ ಕೆಲವು ದೇಶಗಳಲ್ಲಿ ಯಾವುದೇ ಸುದ್ದಿಯನ್ನು ಪ್ರಕಟಿಸಬೇಕಾದರೆ ಏನು ಪ್ರಕಟಿಸಬೇಕು ಏನನ್ನು ಪ್ರಕಟಿಸಬಾರದುಬಾರದು ಎಂಬುದನ್ನು ಅಲ್ಲಿನ ಸರಕಾರವೇ ನಿರ್ಧರಿಸಿ ಸೆನ್ಸಾರ್ ಮಾಡಿದ ನಂತರ ಪತ್ರಿಕೆಗಳಿಗೆ ರಿಲೀಸ್ ಮಾಡುತ್ತದೆ. ಆದರೆ ನಮ್ಮ ದೇಶದಲ್ಲಿ ಪತ್ರಕರ್ತರುಗಳೇ... ಇನ್ನೊಂದರ್ಥದಲ್ಲಿ ಮಾಧ್ಯಮದ ದೊರೆಗಳು ಹಾಗೂ ಪತ್ರಕರ್ತರುಗಳು ತಮಗೆ ಸಿಗುವ ಸಂಭಾವನೆಯ ಆಧಾರದ ಮೇಲೆ ಸುದ್ದಿಯನ್ನು ಸೆನ್ಸಾರ್ ಮಾಡಿ ಪ್ರಕಟಿಸುತ್ತಾರೆ! ಭೇಷ್!

    ನಿಜಹೇಳಬೇಕೆಂದರೆ, ಪತ್ರಿಕೆಯೆಂದರೆ ಅದು ಸಂಪೂರ್ಣ ಜನರ ಸ್ವತ್ತು. ಜನರ ನೋವುನಲಿವು ಗಳೆರಡರಲ್ಲೂ ಸಮಾನ ನೆಲೆಯಲ್ಲಿ ಸ್ಪಂಧಿಸಿ ಅವುಗಳಿಗೆ ನುಡಿಯ ರೂಪವನ್ನು ನೀಡುವ ಶುದ್ಧ ಜೀವನದ ಪ್ರತಿಬಿಂಬವಾಗಿ ಅದು ರೂಪಗೊಳ್ಳಬೇಕು. ಅದು ನಿರ್ಧಿಷ್ಟ, ನಿರ್ಧುಷ್ಟ ಮಾತ್ಸರ್ಯರಹಿತ, ನಿಷ್ಪಕ್ಷಪಾತ ಹಾಗೂ ಸ್ವತಂತ್ರವಾಗಿರಬೇಕು. ಸರಕಾರದ ಅಥವಾ ಇನ್ನಾವುದೇ ಶಕ್ತಿಗಳ ಅಂಕೆ ಅದಕ್ಕಿರಲೇ ಬಾರದು. ಇದು ನಿಜವಾದ ಪತ್ರಿಕಾ ಧರ್ಮ. ಆದರೆ ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಪತ್ರಿಕೊಧ್ಯಮಗಳೊಂದಿಗೆ ಹಾಗೂ ಪತ್ರಿಕಾಕರ್ತರುಗಳನ್ನೂ ಭ್ರಷ್ಟಾಚಾರದ ಕುರಿತು ತೀಕ್ಷ್ಣವಾಗಿ ಬಿಸಿ ಎದ್ದಿರುವ ಜನಲೋಕಪಾಲನೆಯ ಮಸೂದೆಯಡಿಗೆ ಎಳೆದು ತರಬೇಕಾದ ಅವಶ್ಯಕತೆ ಖಂಡಿತಾಯಿದೆ ಅನಿಸುವುದಿಲ್ಲವೇ?

    ವಿಜಯ್ ಬಾರಕೂರು , ಕತಾರ್

    ಪ್ರತ್ಯುತ್ತರಅಳಿಸಿ