ಭಾನುವಾರ, ಆಗಸ್ಟ್ 7, 2011

ಮದನಾರಿ ಬೇಕಾ?



ಸುವರ್ಣ ನ್ಯೂಸ್ ಚಾನೆಲ್ ನಲ್ಲಿ ಪ್ರಸಾರವಾಗುವ ಕಾರ್ಯಕ್ರಮ "ಮದನಾರಿ", ಚಿತ್ರರಂಗದ ಭಾಷೆಯಲ್ಲಿ ಹೇಳಬೇಕಾದರೆ ಇದೊಂದು ಮಸಾಲ ಕಾರ್ಯಕ್ರಮ, ಇದರ ಮುಖ್ಯ ಆಕರ್ಷಣೆ ಎಂದರೆ ಐಟಮ್ ಗರ್ಲ್ ಗಳ ಬಗ್ಗೆ ಸಂಪೂರ್ಣ ವಾದ ವಿವರ ಅವರ ಜೀವನದ ಏಳು ಬೀಳುಗಳ ಬಗ್ಗೆ ವಿವರ, ಅವರಿಗಿರುವ ಬಾಯ್ ಫ್ರೆಂಡ್ ಗಳು ಜತೆಯಲ್ಲಿ ಇರುವವರ ಹಾಗು ಕೈ ಕೊಟ್ಟವರ ಬಗ್ಗೆ ಮಾತು. ಹಾಗು ಚಿತ್ರ ರಂಗಕ್ಕೆ ಪ್ರವೇಶ ಅದರ ಹಿನ್ನೆಲೆ, ಇನ್ನು ಮುಂತಾದ ಚಿತ್ರ ವಿಚಿತ್ರ ಸಂಗತಿ ಗಳಿಂದ ಕಾರ್ಯಕ್ರಮ ವನ್ನು ನಿರೂಪಕಿ ದಿವ್ಯಶ್ರಿ ಅವರಿಂದ ನಿರೂಪಿತ ವಾಗಿತ್ತದೆ. ಪ್ರತಿ ಭಾನುವಾರ ರಾತ್ರಿ ಹಾಗೂ ವಾರದ ದಿನಗಳಲ್ಲಿ ಮತ್ತೆ ಮರುಪ್ರಸಾರ ಮಾಡಲಾಗುತ್ತದೆ.

ಆದರೆ ಇಷ್ಟೇ ಆಗಿದ್ದರೆ ಈ ಕಾರ್ಯಕ್ರಮದ ಬಗ್ಗೆ ನಾವು ಇಲ್ಲಿ ಟೀಕೆ ಮಾಡುವ ಪ್ರಮೇಯ ವೇ ಬರುತ್ತಿರಲಿಲ್ಲ. ಈ ಎಲ್ಲ ವಿವರ ಗಳ ಜತೆಗೆ ಅಶ್ಲೀಲ ದೃಶ್ಯ ಗಳನ್ನು ಪ್ರಸಾರ ಮಾಡುತ್ತಾರಲ್ಲ ಅದು ಹೇಸಿಗೆ ಹುಟ್ಟಿಸುತ್ತೆ.

ಮೊದಲನೆಯದಾಗಿ, ಇಂತಹ ಕಾರ್ಯಕ್ರಮ ಕೊಡಿ ಅಂತ ಕರ್ನಾಟಕದ ಯಾವ ವೀಕ್ಷಕ ನೂ ಇವರಿಗೆ ದುಂಬಾಲು ಬಿದ್ದಿರಲಿಲ್ಲ. ಕೇವಲ ಒಂದು ವರ್ಗದ ವೀಕ್ಷಕರನ್ನು ಮನಸ್ಸಿನಲ್ಲಿಟ್ಟುಕೊಂಡು ಪ್ರಸಾರ ಮಾಡುತ್ತಾರಲ್ಲ ಏನನ್ನಬೇಕು ಇವರನ್ನು. ನೋಡಲೇ ಬೇಕು ಎನ್ನುವ ತೆವಲು ತೀಟೆ ಇರುವ ಜನರು ಹೇಗಾದರು ಮಾಡಿ ನೋಡಿಯೇ ನೋಡುತ್ತಾರೆ ಅದು ಯೂಟ್ಯೂಬ್ ಆಗಿರಬಹುದು, ಅಶ್ಲೀಲ ವೆಬ್ ಸೈಟ್ ಆಗಿರಬಹುದು, ಎಫ್ ಚಾನೆಲ್, ಕೆಲ ಹಿಂದಿ ಚಾನೆಲ್ ಗಳು ಕೊನೆಗೆ ಬ್ಲೂ ಫಿಲ್ಮ್ ಕ್ಯಾಸೆಟ್ ಗಳನ್ನು ಹಾಕಿಯಾದರು ನೋಡುತ್ತಾನೆ.
ಸಂಪೂರ್ಣ ಕುಟುಂಬ ವೀಕ್ಷಿಸುವ ಸುದ್ದಿ ವಾಹಿನಿಗಳಲ್ಲಿ ಇಂತಹ ಅವಲಕ್ಷಣಗಳು ಬಂದರೆ ಮಡಿವಂತ ಜನ ಟಿವಿ ಬಂದ್ ಮಾಡುತ್ತಾರೆ ಅಥವ ಚಾನೆಲ್ ಬದಲಾಯಿಸುತ್ತಾರೆ.
ಅತ್ಯಂತ ಅಶ್ಲೀಲ ವಾಗಿರುವ ಹಸಿ ಬಿಸಿ ದೃಶ್ಯಗಳನ್ನು ಒಂದರ ಹಿಂದೆ ಒಂದು ಪ್ರಸಾರ ಮಾಡುತ್ತ, ಅದು ಒಬ್ಬ ಹೆಣ್ಣು ಮಗಳ ಮುಖಾಂತರ ನಿರೂಪಿಸುತ್ತಾರಲ್ಲ, ಕೊನೆ ಪಕ್ಷ ನಿರೂಪಿಸುವವರಿಗಾದರು ನಾಚಿಕೆ ಯಾಗಲ್ವೆ.

ಹೇಳೋದು ಆಚಾರ ತಿನ್ನೋದು ಬದನೆಕಾಯಿ ಅನ್ನುವಂತೆ ಇವರ ಕೆಲ ಸುದ್ದಿ ವಿಶ್ಲೇಷಕರು ರಾಜಕೀಯ ವನ್ನೇ ಅರೆದು ಕುಡಿದಂತೆ ಮಾತನಾಡುತ್ತಾರೆ ಆದರ ಜತೆಗೆ ಇಂತಹ ಕೀಳು ಮಟ್ಟದ ಕಾರ್ಯಕ್ರಮವನ್ನು ಸಹ ಬಿತ್ತರಿಸುತ್ತಾರೆ .
ಇಂತಹ ಕಾರ್ಯಕ್ರಮ ಗಳಿಂದ ಜನರನ್ನು ಸೆಳೆಯುತ್ತೇವೆ ಅನ್ನುವ ಭ್ರಮೆ ಯಲ್ಲಿದಾರೆ ಈ ಕಾರ್ಯಕ್ರಮದ ನಿರ್ಮಾಪಕರು.

ಕೊನೆ ಪಕ್ಷ ನಟಿಯರ ಸಂದರ್ಶನ ವೇನಾದರು ಅಲ್ಲಿದೆಯೇ? ಅದೂ ಇಲ್ಲ ಹಿನ್ನಲೆ ಧ್ವನಿಯಲ್ಲಿ ನಟಿಯ ಬಗ್ಗೆ ಮಾತುಗಳು ಮತ್ತು ದೃಶ್ಯ ಮಾತ್ರ ಬಹು ಅಶ್ಲೀಲ ವಾದದ್ದು.
ಅದು ಅಲ್ಲದೆ ಮೊನ್ನೆ ತನುಶ್ರಿ ದತ್ತಾ ಬಗೆಗಿನ ಕಾರ್ಯಕ್ರಮದಲ್ಲಿ ಇಮ್ರಾನ್ ಹಶ್ಮಿ ಜತೆಗಿನ ಪ್ರಚೋದಕ ಚುಂಬನ ದೃಶ್ಯಗಳು ಹಾಗೂ ಬೆಡ್ ರೂಮಿನ ಹಸಿ ಹಸಿ ದೃಶ್ಯಾವಳಿಗಳನ್ನು ಯಾವುದೇ ಸೆನ್ಸಾರ್ ಇಲ್ಲದೆ ಬಿತ್ತರಿಸಿದರು.

ಪ್ರತಿವಾರ ಒಬ್ಬ ನಟಿಮಣಿಯ ಮೈ ಮಾದಕ ಚೆಲುವುಗಳ ಬಗ್ಗೆ ಹಾಗು ಅವರು ನಟಿಸಿದ ಹಸಿ ಹಸಿ ಕಾಮ ಪ್ರಚೋದಕ ದೃಶ್ಯಗಳ ಜೋಡಣೆ ಯೊಂದಿಗೆ ೩೦ ನಿಮಿಷದ ಕಾರ್ಯಕ್ರಮ ತಯಾರು. ಒಂದು ವಾರ ಮುಮೈತ್ ಖಾನ್ ನಟಿಸಿದ ಚಿತ್ರಗಳ ಬಗ್ಗೆ ವರದಿಯಾಯ್ತು ಹಾಗೆ ಇನ್ನೊಂದು ಒಂದು ವಾರ ಹಾಟ್ ಮಾಡೆಲ್ ಮಲ್ಲಿಕಾ ಶೆರಾವತ್. ಇಂಥ ನಟಿಯರು ನಟಿಸಿದ ಎಲ್ಲ ಚಿತ್ರಗಳ ಸಕತ್ ಹಾಟ್ ಹಾಟ್ ದೃಶ್ಯಗಳನ್ನು ಒಂದೇ ಕಾರ್ಯಕ್ರಮದಲ್ಲಿ ನೋಡುವ ಸೌಭಾಗ್ಯ ನಮ್ಮ ಕರುನಾಡ ಕನ್ನಡಿಗನಿಗೆ. ಎಲ್ಲೆಲ್ಲಿಂದನೋ ಹೆಕ್ಕಿ ತಂದು ನಮ್ಮ ನಾಡಿನ ಜನರಿಗೆ ಉಣಬಡಿಸುವ ಹರಕತ್ತು ಏನಿದೆಯೋ ಕಾಣೆ?

ಹಿರಿಕಿರಿಯರು ನೋಡುವ ಕನ್ನಡ ಚಾನೆಲ್ ನಲ್ಲಿ ಇಂತಹ ದೃಶ್ಯಗಳು ಯಾಕೆ ಬೇಕು?

ಹೋಗಲಿ ಈ ನಟಿ ಮಣಿಯರು ಕನ್ನಡ ನಾಡಿನವರಾ? ಇಲ್ಲ ಇವರು ನಟಿಸಿದ ಚಿತ್ರಗಳು ಕನ್ನಡ ಚಿತ್ರಗಳಾ? ಇಲ್ಲ ಕೊನೆ ಪಕ್ಷ ಹೊಸ ಕನ್ನಡ ಚಿತ್ರದಲ್ಲಿ ನಟಿಸಲು ಏನಾದರು ರಾಜ್ಯಕ್ಕೆ ಬಂದಿದ್ದಾರಾ? ಯಾವುದು ಇಲ್ಲ. ಬಹುತೇಕ ದೃಶ್ಯಗಳು ಬೇರೆ ಭಾಷೆಯ ಚಿತ್ರದ್ದು, ನಟಿಮಣಿಯರು ಸಹ ಹೊರಗಿನವರೇ.

ನಮ್ಮ ಕನ್ನಡ ಚಾನೆಲ್ ನಲ್ಲಿ ಇಂತಹ ಕಾರ್ಯಕ್ರಮದ ಅವಕಶ್ಯತೆ ಇದೆಯಾ?

ಇವರು ಎಂತಹ ಹುಷಾರು ಜನ ಎಂದರೆ, ಸಾಮನ್ಯವಾಗಿ ಇವರ ಎಲ್ಲ ವೀಡಿಯೋ ಗಳನ್ನು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡುವ ಮಂದಿ  ಮದನಾರಿ ಬಗೆಗಿನ ಒಂದೇ ಒಂದು ಕಾರ್ಯಕ್ರಮವನ್ನು ಇದುವರೆವಿಗೂ ಅಪ್ ಲೋಡ್ ಮಾಡಿಲ್ಲ. ಇಲ್ಲೇ ಗೊತ್ತಾಗುತ್ತೆ ಇವರು ಎಂತಹ ಚಾಲಾಕಿ ಜನ ಎಂದು.

ಈ ಚಾನೆಲ್ ಗೆ ವಿ.ಭಟ್ ಬೇರೆ ಮುಖ್ಯಸ್ಥ ರಾಗಿದ್ದಾರೆ.  ಸುದ್ದಿ ಮಾಧ್ಯಮ ಅದರಲ್ಲೂ ದೃಶ್ಯ ಮಾಧ್ಯ್ವಮ ಎಷ್ಟೊಂದು ಜವಬ್ದಾರಿ ಯುತವಾಗಿರಬೇಕು ಎನ್ನುವುದನ್ನು ಅವರು ತುಂಬಾ ಲೇಖನ ಗಳಲ್ಲಿ ಬರೆದಿದ್ದಾರೆ. ಕಾಕತಾಳೀಯ ಅಂದ್ರೆ ಅವರು ಮುಖ್ಯಸ್ಥ ರಾಗಿರುವ ಚಾನೆಲ್ ನಲ್ಲಿ ಇಂತಹ ಕಾರ್ಯಕ್ರಮ ಗಳು ಪ್ರಸಾರ ವಾಗುತ್ತಿವೆ.


ಕರ್ನಾಟಕ ದ ಖ್ಯಾತ ವಿಖ್ಯಾತ ಹಮೀದ್ ಪಾಳ್ಯ ಮತ್ತು ರಂಗನಾಥ ಭಾರಧ್ವಾಜ್ ಎನ್ನುವ ಮಹಾಶಯರಿಬ್ಬರ ಮುಂದಾಳತ್ವದಲ್ಲಿ ಸುವರ್ಣ ನ್ಯೂಸ್ ರಥ ಓಡುತ್ತಿದೆ. ರಾಜ್ಯದ ರಾಜಕೀಯವನ್ನು  ವ್ಯಂಗ್ಯ, ವಿಡಂಬನೆ, ಟೀಕೆ ಗಳಿಂದ ನಿರೂಪಿಸುತ್ತಿರುವ ಈ ಮಂದಿ ತಮ್ಮದೇ ಚಾನೆಲ್ ನಲ್ಲಿ ಬರುತ್ತಿರುವ ಈ ಮದನಾರಿ ಕಾರ್ಯಕ್ರಮದ ಬಗ್ಗೆ ಕಮಕ್ ಕಿಮಕ್ ಎನ್ನುತ್ತಿಲ್ಲ.
ಸ್ವಲ್ಪ ಲಗಾಮು ಹಾಕಿ ಇಂತಹ ಕಾರ್ಯಕ್ರಮ ಗಳನ್ನು ನಿಯಂತ್ರಿಸಿದರೆ ಅವರ ಚಾನೆಲ್ ಗೆ ಇರುವ ಹೆಸರು ಇಮ್ಮಡಿ ಯಾಗುವುದರಲ್ಲಿ ಸಂಶಯವಿಲ್ಲ.

5 ಕಾಮೆಂಟ್‌ಗಳು:

  1. ಸುವರ್ಣ ನ್ಯೂಸ್ ಚಾನೆಲ್ ಮೊದಮೊದಲು ಸಂಸಾರಿಕ ವೀಕ್ಷಣೆಯ ಮಾದ್ಯಮವಾಗಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಇದು ನಮ್ಮ ರಾಜ್ಯದ ಹೊಲಸು ರಾಜಕೀಯದಂತೆ ಇದೂ ಸಹ ಕುಲಗೆಡುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ . ಮಾದ್ಯಮಗಳು ಹಾಗು ಪತ್ರಿಕೊದ್ಯಮಗಳು ಸಮಾಜ ಸುಧಾರಣೆಯ ಒಂದು ಅಂಗವಾಗಿರಬೇಕೆ ವಿನಃ ಸಮಾಜವನ್ನು ಮುಜುಗರಕ್ಕೊಳಪದಿಸಬಾರದು ಎಂಬುದು ನನ್ನ ಅನಿಸಿಕೆ .

    ಪ್ರತ್ಯುತ್ತರಅಳಿಸಿ
  2. ಗೆಳೆಯರೇ, ನಾವು ಹೇಳಿದ್ದೇ ವೇದವಾಕ್ಯ, ನಾವು ತೋರಿಸಿದ್ದೇ ಸತ್ಯ, ಸಾಧನೆ ಎಂಬ ಮನೋಭಾವನೆ ಹೊಂದಿರುವ ಸುವರ್ಣವಾಹಿನಿಯವರು, ಅವರಿಗೆ ಅವರು ಮಾಡುತ್ತಿರುವ ತಪ್ಪುಗಳನ್ನು ತೋರಿಸುತ್ತಾ ಬರೆದು ಬರೆದು ಕಳುಹಿಸಿ ನಾನೇ ಸುಸ್ತಾಗಿ ಹೋದೆ. ಪ್ರತಿದಿನ ಕನ್ನಡ ಕಾಗುಣಿತಗಳ ತಪ್ಪುಗಳು, ಅವುಗಳನ್ನು ಮೂರ್ನಾಲ್ಕು ವರ್ಷಗಳಿಂದಲೂ ಕಾರ್ಡ್ ನಲ್ಲಿ ಬರೆದು ಕಳುಹಿಸಿ, ಈಮೇಲ್ ಮಾಡಿಯಾಯಿತು. ಎಲ್ಲರೂ ಅಚ್ಚ ಕನ್ನಡಿಗರೇ, ಆದರೂ ಕನ್ನಡದ ಕೊಲೆಯಾಗುತ್ತಿದೆ. ಕಾರ್ಯಕ್ರಮಗಳ ಬಗ್ಗೆ ಫೋನ್ ಮಾಡಿದರೂ ಸರಿಯಾದ ಉತ್ತರ ಕೊಡುವವರು ಯಾರೂ ಇಲ್ಲ. ಲೋಕದ ಡೊಂಕನ್ನು ತಿದ್ದೋಕೆ ಹೊರಟಿವವರು, ತಮ್ಮ ಡೊಂಕನ್ನು ಹೇಳಿದರೆ ಉತ್ತರವಿರುವುದಿಲ್ಲ. "ಮದನಾರಿ" ಈ ಕಾರ್ಯಕ್ರಮ ಬೇಕಿತ್ತಾ? ಅನ್ನೋ ಪ್ರಶ್ನೆ ನನ್ನ ತಲೆಯಲ್ಲೂ ಬಂದಿತ್ತು. ಇವರುಗಳಿಗೆ ಸಾಮಾಜಿಕ ಕಳಕಳಿಯ ಬಗ್ಗೆ ಅರಿವಿಲ್ಲ. ಯೋಚನೆಯೂ ಇಲ್ಲ.ಬ್ರೇಕ್ ಫಾಸ್ಟ್ ನ್ಯೂಸ್ ನಲ್ಲಿ ಪೂನಂ ಪಾಂಡೆ ಬಟ್ಟೆ ಬಿಚ್ಚಿರುವ ಸುದ್ದಿಯನ್ನು ಪ್ರಸಾರ ಮಾಡುತ್ತಾರೆ. ನಾನು ಭ್ರಷ್ಟಾಚಾರದ ಬಗ್ಗೆ ಪುಟಗಟ್ಟಲೇ ಬರೆದು ಈ ಮೇಲ್ ಮಾಡಿ ಅಂಚೆ ಮೂಲಕ ಕಳುಹಿಸಿದರು ಒಂದೇ ಒಂದು ಚಕಾರ ಎತ್ತುವುದಿಲ್ಲ. ವಿಶ್ವೇಶ್ವರ ಭಟ್ರು ನೋಡ್ತಾ ಇರಿ ನಾವೇನ್ ಮಾಡ್ತೀವಿ ಅಂತ ಹೇಳಿಕೊಳ್ಳುತ್ತಾ ಇರುತ್ತಾರಲ್ಲ. ಇದೇ ಅದಕ್ಕೆ ಉದಾಹರಣೆ.

    ಪ್ರತ್ಯುತ್ತರಅಳಿಸಿ
  3. ಯಡಿಯೂರಪ್ಪ ಮುಖ್ಯಮಂತ್ರಿ ಖುರ್ಚಿಯಿಂದ ಇಳಿದ ತಕ್ಷಣ ಕೇಕ್‌ ಕತ್ತರಿಸಿ ಸಂಭ್ರಮಿಸಿದವ್ರು ಸುರ್ವಣ ಪತ್ರಕರ್ತರು. ಓದಲು ವಿದೇಶ ಪ್ರವಾಸಕ್ಕೆ ಹೊರಟ ವಿಶ್ವೇಶ್ವರ ಭಟ್ಟರು ಮತ್ತ್ಯಾಕೆ ಪತ್ರ್ರಿಕೋದ್ಯಮಕ್ಕೆ ಬಂದರು? ಟೈಮ್ಸ್‌ ಆಫ್‌ ಇಂಡಿಯಾ ಹೊರಹಾಕಿದ್ದು ಅನ್ನುವ ಸುದ್ದಿ ಮುಚ್ಚಿಹೋಯ್ತು. ಬಿಜೆಪಿ ಸರಕಾರ ಕೆಡಗಲು ಕುಮಾರಸ್ವಾಮಿ ವಿಕದ ಭಟ್ಟರು ಹಾಗೂ ಚಾನೆಲ್‌ ೯ ರ ಹೂಗಾರ್‌ನಿಗೆ ಹಣ ಕೊಟ್ಟಿದ್ದು ಬಹಿರಂಗವಾಗಿದೆ. ಅದು ಗೊತ್ತಾದ ಕೂಡಲೆ ಟೈಮ್ಸ್ಯ್ ಭಟರನ್ನು, ಅವರ ಭಟ್ಟಂಗಿಗಳನ್ನು ಹೊರಹಕಿದೆ. ಪ್ರತಪ್‌ ಇದನ್ನೆಲ್ಲ ಯಾಕೆ ತನ್ನ ಅಂಕಣದಲ್ಲಿ ಬರೆಯಲ್ಲ? ಇವರುಗಳು ಬೇರೆಯವ್ರಿಗೆ ಉಪದೇಶ ಮಾಡಾರೆ...

    ಪ್ರತ್ಯುತ್ತರಅಳಿಸಿ
  4. keelu mattada pracharakkagi enella maadalu tayaariddare.avarige t.r.p.beku ashte.intha chanelge dhikkara!

    ಪ್ರತ್ಯುತ್ತರಅಳಿಸಿ
  5. ಪ್ರಶಾಂತ್,
    ನೋಡಿ ಸ್ವಾಮಿ, ಕಾಲ ಕೆಟ್ಟೋಗಿದೆ. ಜನ ಹೊರಗಿರೋದನ್ನ ನೋಡದಕ್ಕಿಂತಾ ಒಳಗಿರೋದನ್ನ ನೋಡೋಕೆ ಇಷ್ಟಪಡ್ತಾರೆ. ಅದ್ರಲ್ಲೂ ಪೂರ್ತಿ ನೋಡೋದಕ್ಕಿಂತ ಅರ್ಧಂಬರ್ದಾ ನೋಡಿ ಮಜಾ ತಗೋಳ್ಳೋರೆ ಜಾಸ್ತಿ. ಹಾಗಾಗಿ ಅಂತಹವರನ್ನ ಸೆಳೆಯಕ್ಕೆ ಹಾಗೂ ಯುವ ಜನಾಂಗವನ್ನ ಅಟ್ರ್ಯಾಕ್ಟ್ ಮಾಡಿ ಟಿ.ಆರ್ ಪಿ ರೇಟ್ ಹೆಚ್ಚಿಸಿಕೊಳ್ಳೋಕೆ ಈ ರೀತಿಯ 3rd ಕ್ಲಾಸ್ ಪ್ರೋಗ್ರಾಮ್ ಗಳನ್ನ ಪ್ರಸಾರ ಮಾಡ್ತಾರೆ. ಈಚಾನೆಲ್ ನವರಿಗೆ ತಾಕತ್ ಇದ್ರೆ ತಮ್ಮ ಕುಟುಂಬಸ್ಥರೊಂದಿಗೆ ಕೂತು ಈ ಪ್ರೋಗ್ರಾಂ ವೀಕ್ಷಿಸಲು ನೋಡೋಣ.

    ಪ್ರತ್ಯುತ್ತರಅಳಿಸಿ