ಶನಿವಾರ, ಜೂನ್ 4, 2011

ಬಾಬಾ ಮಾಡಬಾರದಾಗಿದ್ರೆ ಯಾರು ಮಾಡ್ಬೇಕಾಗಿತ್ತು?


ಸರಿ ಹೋಯ್ತು ಕಣಪ್ಪ, ಬಾಬಾ ಸತ್ಯಾಗ್ರಹ ಮಾಡಬಾರದಾಗಿದ್ರೆ ಮತ್ತೆ ಯಾರು ಮಾಡ್ಬೇಕಾಗಿತ್ತು?
ಅಲ್ಲಾ ಮಾರಾಯ ಒಂದು ಒಳ್ಳೇ ಕೆಲಸಕ್ಕೆ ಹಿಂಗಾ ಕಾಲೆಯೋಳೋದು?
ಸ್ವಾಮ್ಯೋರೆ, ಈ ವಯ್ಯ ಬಾಬ ಎಷ್ಟೊಂದು ದಿನಗಳಿಂದ ವಿದೇಶಿ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣವನ್ನು ವಾಪಾಸು ತರಬೇಕು ಅಂಥಾ ಊರೂರುಗಳಲ್ಲಿ ಬೊಂಬಡ ಒಡಕಂತಿದ್ರು ಅವಾಗ ನಿಮ್ಮ ಕಿವಿಗೆ ಕೇಳಿಲ್ವ, ಈಗ ನೋಡಿದ್ರೆ ಭ್ರಷ್ಟಾಚಾರ ವಿರೋಧಿಸುವುದು ಈಗೀಗ ಒಂದು ಫ್ಯಾಷನ್... ಅಂತ ಕಥೆ ಬಿಡ್ತಾ ಯಿದ್ದೀರಲ್ಲ. ಅದು ಇರಲಿ ಬಿಡಿ, ಅದ್ಯಾವಾಗೊ ಸಂವಾದ ನಡೆದಿತ್ತು ಅಂತ ಇವಾಗ ಅದರ ಕಥೆ ಹೊರಗಡೆ ತೆಗಿತಾಯಿದೀರಾ ಅಲ್ಲ ಇದರ ಮರ್ಮ ಏನು ಸಾಮಿ?
ಆಮೇಲೆ ಏನಂತೀರಾ ಸಂಸ್ಥೆಯ ವಾರ್ಷಿಕ ವಹಿವಾಟು ೧೧೦೦ ಕೋಟಿ ರೂ.ಗಳೆಂದು ಹೇಳಿಕೊಂಡಿದ್ದಾರೆ. ಇಷ್ಟೊಂದು ಹಣ ಕೆಲವೇ ವರ್ಷಗಳಲ್ಲಿ ಹೇಗೆ ಬಂತು ಎಂದು ಜನರು ಪ್ರಶ್ನಿಸುವುದು ಸ್ವಾಭಾವಿಕವೇ ಹೌದು ಅಂತ ಅಂದ್ರಿ, ಹಾಗಿದ್ರೆ ಪ್ರಶ್ನೆ ಮಾಡಿ, ಸಿಬಿಐ ಇದೆ, ಸುಪ್ರಿಂ ಕೋರ್ಟ್ ಇದೆ ಕೇಸ್ ದಾಖಲು ಮಾಡಿ ಸಾರ್. ಎಲ್ಲ ಹೊರಗೆ ಬರುತ್ತೆ. ಬೇಡ ಅಂತ ಹೇಳಿದವರು ಯಾರು.
ಒಂದು ಜಾತಿ ಪ್ರಮಾಣ ಪತ್ರ ಮಾಡಿಸುವುದಕ್ಕೇ ಲಂಚ ಕೊಡಬೇಕಾದ ಪರಿಸ್ಥಿತಿಯಿರುವ ಈ ದೇಶದಲ್ಲಿ ಬಾಬಾ ಅವರು ಇಷ್ಟೊಂದು ದೊಡ್ಡ ವಹಿವಾಟು ಮಾಡುವ ಸಂದರ್ಭದಲ್ಲಿ ಯಾರ ಕೈಯನ್ನೂ ಬೆಚ್ಚಗೆ ಮಾಡಿಲ್ಲವೆಂದು ನಂಬುವುದು ಹೇಗೆ ಎಂದು ಜನಸಾಮಾನ್ಯರು ಕೇಳುವುದೂ ಸಹಜವೇ ತಾನೆ? ಅದೆಲ್ಲಾ ಸರಿ, ನಂಬಬೇಕು ಅಂತ ಯಾರು ಹೇಳಿದ್ದಾರೆ. ಪ್ರಶ್ನೆ ಮೇಲೆ ಪ್ರಶ್ನೆ ಕೇಳಿ, ಕೋರ್ಟ್ ನಲ್ಲಿ ತೀರ್ಮಾನ ಆಗಲಿ ತಪ್ಪಿತಸ್ಥ ರಾದರೆ ತಿಹಾರ್ ಜೈಲ್ ಗೆ ಹೋಗ್ತಾರೆ.
ಅಲ್ಲಾ ಸ್ವಾಮಿ ಮೊಸರಲ್ಲಿ ಕಲ್ಲು ಹುಡುಕೋದಿಕ್ಕೆ ಹೋಗ್ತೀರಲ್ಲಾ, ಆಸ್ತಿ ಎಲ್ಲಾ ಮಾಡಿ ಹೆಂಡ್ತಿ ಮಕ್ಕಳಿಗೆ ಹಂಚೋದಿಕ್ಕೆ ಏನಾದ್ರು ಹೆಂಡ್ತಿ ಯಿದ್ದಾರಾ? ಮಕ್ಕಳಿದ್ದಾರಾ? ಹೋಗಲಿ ಬೇರೆ ಏನಾದರು ಸಂಭಂದ ಇದೆಯಾ? ಅವರು ಏನೇ ಮಾಡಿದ್ರು ನಮ್ಮ ಜನ ಸಾಮಾನ್ಯರಿಗೆ ಅನ್ನೋದನ್ನ ಮರಿ ಬೇಡಿ ಸಾಮಿ.
ರಾಮದೇವ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು. ಅಧ್ಯಾತ್ಮ ಜನರ ಜೀವನ ದೃಷ್ಟಿ, ವಿಧಾನವನ್ನು ಬದಲಿಸಬೇಕು. ಮಾನವೀಯತೆಯನ್ನು ಬೋಧಿಸಬೇಕು.
ಅದನ್ನೇ ತಾನೆ ಇಷ್ಟು ದಿನ ಅವರು ಮಾಡಿಕೊಂಡು ಬಂದಿದ್ದು,
ದೇಶದಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತವಾಗಿದೆ. ಸಾಮಾಜಿಕ ಶ್ರೇಣೀಕರಣದಿಂದ ದೇಶದ ಅಂತಃಸತ್ವವೇ ನಾಶವಾಗಿದೆ. ಎಲ್ಲರಿಗೂ ನೀರು-ನೆರಳು ಕೊಡಬೇಕಿದ್ದ ಧರ್ಮವೇ ಜನರನ್ನು ಶೋಷಿಸುವ ಸಲಕರಣೆಯಾಗಿದೆ.
ಅದೇ ಹಳೇ ಪುರಾಣದ ಕಥೆ ಹೊಡಿಬೇಡಿ, ಇದು ಒಬ್ಬ ವ್ಯಕ್ತಿಯಿಂದ ಆಗೋ ಕೆಲಸ ಅಲ್ಲ ಅಂತ ನಮಗಿಂತ ನಿಮಗೇ ಚೆನ್ನಾಗಿ ಗೊತ್ತು.
ಬಡತನ, ರೋಗರುಜಿನದಿಂದ ಜನ ನರಳುತ್ತಿದ್ದಾರೆ.
ಬಾಬಾರವರು ಬಡಜನರಿಗೆಂದೇ ತೆರೆದಿರುವ ಆಸ್ಪತ್ರೆ ಗಳಿವೆ, ಅಲ್ಲಿಗೆ ಬರಬೇಡಿ ಅಂತ ಯಾರು ಹೇಳಿಲ್ಲ. ಅಂತವರಿಗೆ ಅಲ್ಲಿ ಚಿಕಿತ್ಸೆ ಕೊಡುವ ಕಾರ್ಯ ಆಗಲೇ ನಡೀತಾಯಿದೆ.
ಅಭಿವೃದ್ಧಿಯ ಹೆಸರಲ್ಲಿ ಅಮಾಯಕ ಜನರು ಬೀದಿಪಾಲಾಗಿದ್ದಾರೆ.
ಅದಕ್ಕೆ ಕಾರಣಯಾರು, ಬಾಬಾರವರಾ? ೬೦ ವರ್ಷ ಗಳಿಂದ ಆಳ್ವಿಕೆ ನಡೆಸಿದ ಸರ್ಕಾರ ಅಲ್ವೆ ಸ್ವಾಮಿ.
ರೈತರು-ಕೂಲಿಕಾರ್ಮಿಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಅವರ ಯೋಗ ಶಿಬಿರದಲ್ಲಿ ಇದರ ಬಗ್ಗೆ ಹಲವಾರು ಬಾರಿ ಜನರಲ್ಲಿ ಮನವಿ ಮಾಡಿದ್ದಾರೆ, ಅವರ ಹಳೆಯ ಪ್ರವಚನಗಳಲ್ಲಿ ಇದರ ಬಗ್ಗೆ ಬಹಳಷ್ಟು ಮಾತಾಡಿದ್ದಾರೆ. ಅದಿರಲಿ ಅದು ಸಹ ಬಾಬಾರವರ ಕರ್ತವ್ಯವೇ ಅದು ಸರ್ಕಾರದ ಜವಬ್ದಾರಿಯಲ್ಲವೇ? ಬಾಬಾ ಸರ್ಕಾರ ನಡೆಸುತ್ತಿರುವವರೆ? ಯಾಕ್ರಿ ಸ್ವಾಮಿ ಎಲ್ಲಾ ಸಮಸ್ಯೆಗಳಿಗೆ ಒಬ್ಬರನ್ನೇ ಹೊಣೆ ಮಾಡ್ತೀರಾ. ೬೦ ವರ್ಷ ಗಳಿಂದ ಆಳ್ವಿಕೆ ನಡೆಸಿದ ಸರ್ಕಾರ ವಿಲ್ಲವೇ ಅವರನ್ನು ಕೇಳಿ.
ಭಾರತವನ್ನು ಆಧ್ಯಾತ್ಮಿಕ ರಾಷ್ಟ್ರವೆಂದು ಘೋಷಿಸುವ ರಾಮದೇವ ಭಾರತದ ಹೀನ ಸಾಮಾಜಿಕ ವ್ಯವಸ್ಥೆಯನ್ನು ಬದಲಿಸಲು ಏನನ್ನಾದರೂ ಮಾಡಿದ್ದಾರೆಯೇ? ಅಧ್ಯಾತ್ಮ ಜೀವಿಗಳ ಮೊದಲ ಕರ್ತವ್ಯವೇ ಸಮಾಜದ ಇಂಥ ಹೀನಾತಿಹೀನ ಕೊಳಕುಗಳನ್ನು ನಿರ್ಮೂಲನೆ ಮಾಡುವುದಲ್ಲವೆ?
ಎಲ್ಲ ರೀತಿಯ ನಿಯಂತ್ರಣ ಹೊಂದಿರುವ ಸರ್ಕಾರ ಮಾಡದೆ ಇರುವುದನ್ನು ಯಾವುದೇ ಅಧಿಕಾರ ಇಲ್ಲದ ಬಾಬಾ ರವರಿಂದ ನಿರೀಕ್ಷಿಸುತ್ತೀರಲ್ಲಾ, ಇದಕ್ಕೇನು ಹೇಳ್ಬೇಕು ಸ್ವಾಮಿ.
ಅಷ್ಟಕ್ಕೂ ಸಂವಿಧಾನದ ಮೂಲತತ್ತ್ವವನ್ನೇ ಒಪ್ಪದ ಇಂಥ ಮನುಷ್ಯರು ಪ್ರಜಾಪ್ರಭುತ್ವ ದೇಶದಲ್ಲಿ ಸತ್ಯಾಗ್ರಹ ನಡೆಸುತ್ತಾರೆ ಎನ್ನುವುದೇ ಅಪಹಾಸ್ಯದ ವಿಷಯ.
ಸಂವಿಧಾನ ಬರೆದ ಅಂಬೇಡ್ಕರ್ ರವರು ಹತ್ತು ವರ್ಷ ಗಳ ಬಳಿಕ ಮೀಸಲಾತಿ ಯನ್ನು ತೆಗೆದು ಹಾಕಿ ಅಂತ ಹೇಳಿದ್ರು, ಇನ್ನೂ ಯಾಕ್ರಿ ಸ್ವಾಮಿ ತೆಗೆದು ಹಾಕಿಲ್ಲ? ಬೇರೇ ಧರ್ಮಕ್ಕೆ ಮತಾಂತರ ಆದರು ಸಹ ಮೀಸಲಾತಿ ಬೇಕು ಅಂತೀರಲ್ಲಾ ಇದಕ್ಕೇನು ಅನ್ನಬೇಕು ಸ್ವಾಮಿ.
ಭಾರತದ ಸಾರ್ವಭೌಮತ್ವ ಹಾಗು ಸಂವಿಧಾನ ವನ್ನೇ ಒಪ್ಪದ, ಭಾರತದ ರಾಷ್ಟ್ರಧ್ವಜವನ್ನೇ ಸುಡುವ ಜನರನ್ನು ಖಂಡಿಸದ ಜನ ಬಾಬಾ ರ ಬಗ್ಗೆ, ಅವರ ಹಿನ್ನಲೆ ಬಗ್ಗೆ, ಅವರ ರಾಷ್ಟ್ರ ಪ್ರೇಮದ ಬಗ್ಗೆ, ಅವರಾಡಿದ ಮಾತುಗಳ ಬಗ್ಗೆ ಖಂಡಿಸುವ ಪರಿ ಕಂಡು ಏನೆನ್ನ ಬೇಕೋ? ಸಂಸತ್ತಿ ನ ಮೇಲೆ ದಾಳಿ ಮಾಡಿದ ಅಫ್ಜಲ್ ಗುರುವಿನ ಬಗ್ಗೆ ಕನಿಕರ ಇರುವಷ್ಟು ಯೋಗ ಗುರುವಿನ ಮೇಲೆ ಇಲ್ಲವೇ?
ಇಂತದಕ್ಕೆಲ್ಲ ಭಾರತ ಮಾತೆ ಸಾಕ್ಷಿ ಯಾಗಬೇಕಲ್ಲ. ಕ್ಷಮಿಸಿ, ಭಾರತ ಮಾತೆ ಅಂದ್ರೆ ಜಾತ್ಯಾತೀತತೆಗೆ ದಕ್ಕೆ ಬರಬಹುದು. ಅದಕ್ಕೆ ಇಂತದಕ್ಕೆಲ್ಲ ...ನಾವೆಲ್ಲಾ.... ಸಾಕ್ಷಿ ಯಾಗಬೇಕಲ್ಲ.
ನಿಮ್ಮ ಎಲ್ಲಾ ಅನಿಸಿಕೆ ಗಳು ಅಭಿಪ್ರಾಯ ಗಳ ಹಿಂದೆ ಒಂದು ಹಿಡನ್ ಅಜೆಂಡಾ ಇದೆ ಅಂತ ಚೆನ್ನಾಗಿ ಗೊತ್ತು. ಅದರ ಬಗ್ಗೆ ಮುಂದೆ ಚರ್ಚೆ ಮಾಡೋಣ.
ಕೊನೆಗೊಂದು ಮಾತು, ಒಟ್ಟಿನಲ್ಲಿ ನಿಮ್ಮ ಪ್ರಕಾರ ಒಬ್ಬ ಹಿಂದುತ್ವ ವಾದಿ, ಆರೆಸ್ಸೆಸ್, ಬಿಜೇಪಿ,ವಿ ಹೆಚ್ ಪಿ, ಸ್ವಾಮೀಜಿಗಳು, ಚಿದಾನಂದಮೂರ್ತಿ,ಪೇಜಾವರ ಶ್ರೀಗಳು ಮಾತ್ರ ಯಾವುದೇ ಹೋರಾಟ ಮಾಡಬಾರದು ಅವರ ಬದಲು ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಯಡಿಯೂರಪ್ಪ, ಕರುಣಾನಿಧಿ, ಹಸನ್ ಅಲಿ, ರಾಜಾ, ಸುರೇಶ್ ಕಲ್ಮಾಡಿ, ಕನಿಮೋಳಿ ಮುಂತಾದವರು ಬಂದ್ರೆ ನಾವು ಅವರಿಗೆ ಬೆಂಬಲ ಕೊಡ್ತೀವಿ ಅಂತ ಗೋಶಣೆ ಮಾಡ್ಬೇಕು ಅಲ್ವಾ ಸಾ, ಬಹುಶ: ಇದು ಸರಿ ಹೋಗಬಹುದು
ಸರಿ ಬುಡಿ...... ಎಲ್ಲಾ ನಿಮ್ದುಕೇ ಜೈ... ನಮ್ದೂಕೆ ಏನು ಜೈ ಇಲ್ಲಾ....

4 ಕಾಮೆಂಟ್‌ಗಳು:

  1. ಶ್ರೀ. ಮಹೇಶ ಪ್ರಸಾದ ನೀರ್ಕಜೆ ಅವರ ಲೇಖನ "ರಾಮದೇವ್,ಮೀಡಿಯಾ ಮತ್ತು ಸಂಪಾದಕೀಯ"ದ ಪೂರಕವಾಗಿರುವ ನಿಮ್ಮ ಸಮಯೋಚಿತ ವೈಚಾರಿಕ ಲೇಖನದ ಕೊಂಡಿಯನ್ನು 'ನಿಲುಮೆ'ಯ ಮುಖಾಂತರ ನಾಡಿನ ಹಾಗೂ ವಿದೇಶದ ಕನ್ನಡಿಗರ ಮುಂದಿಟ್ಟ ಮಹಾನುಭಾವರಿಗೆ ವಂದನೆಗಳು.

    -ಪ.ರಾಮಚಂದ್ರ,
    ರಾಸ್ ಲಫ್ಫಾನ್, ಕತಾರ್.

    ಪ್ರತ್ಯುತ್ತರಅಳಿಸಿ
  2. ನಮ್ಮ (ನಕಲಿ)ಸೇಕುಲರ ವಾದಿ ಪ್ರಕಾರ್ ಬಾಬಾ ಒಬ್ಬ ಕೋಮುವಾದಿ ಏಕೆಂದರೆ
    ೧) ಅವರ ಹೆಸರಲ್ಲಿ ರಾಮ್ ಇದೆ.
    ೨) ಅವರು ಯೋಗ ಕಲಿಸುತ್ತಾನೆ.
    ೩) ಸ್ವದೇಶೀ ಎನ್ನುತ್ತಾನೆ.
    ೪) ಕೇಸರಿ ಬಣ್ಣ ದ ಉಡುಗೆ ತೊಡುತ್ತಾನೆ.
    ೫) ಮರದಿಂದ ಮಾಡಿದ ಚಪ್ಪಲಿ ಧರಿಸುತ್ತಾನೆ.
    ೬) ಜನರು ಶಕ್ತಿ ಶಾಲಿ ಗಳಾಗಿ ಎನ್ನುತ್ತಾನೆ.
    ೭) ಜನರಿಗೆ ಭಯೋತ್ಪಾದನೆ ವಿರುದ್ದ ಹೋರಾಡಿ ಎನ್ನುತ್ತಾನೆ ಅಂದ್ರೆ ಇತ
    ಅಲ್ಪ ಸಂಖ್ಯಾ ವಿರೋಧಿ ಇರಬಹುದು..!!?

    ಅಂದರೆ ಈತನನ್ನು ಕೋಮುವಾದಿ ಅನ್ನಬಹುದಲ್ಲವೇ ..?
    ವಿಠಲ್ ರಾವ್ ಕುಲಕರ್ಣಿ ಮಲಖೇಡ್

    ಪ್ರತ್ಯುತ್ತರಅಳಿಸಿ
  3. ಚೆನ್ನಾಗಿ ಉತ್ತರ ನೀಡಿದ್ದೀರಿ. ಸಂಪಾದಕೀಯ ಸಂಪೂರ್ಣ ಪೂರ್ವಗ್ರಹದಿಂದ ಬರೆದ ಲೇಖನ ಇದು. ಸಂಪಾಕೀಯದ ಹಿಡೆನ್ ಅಜೆಂಡಾ ಸ್ಪಷ್ಟ ಮಾಡಲಿ ಮೊದಲು.

    ಪ್ರತ್ಯುತ್ತರಅಳಿಸಿ
  4. ಪ್ರತಿಕ್ರಿಯಿಸಿದ ಶ್ರೀ ಪ.ರಾಮಚಂದ್ರ, ಶ್ರೀ ವಿಠಲ್ ರಾವ್ ಕುಲಕರ್ಣಿ ಮತ್ತು ಶ್ರೀ ರವೀಂದ್ರ ರವರಿಗೆ ಧನ್ಯವಾದಗಳು. ನ್ಯಾಯಾಂಗ ಮತ್ತು ಮಾದ್ಯಮ ಕ್ಷೇತ್ರ ಪಕ್ಷಾತೀತವಾಗಿ ಕೆಲಸ ಮಾಡಬೇಕು ಅಂತ ಪ್ರತಿಯೊಬ್ಬರೂ ಬಯಸುವುದು ಸಹಜ. ಪತ್ರಿಕಾ ಕ್ಷೇತ್ರದಲ್ಲಿ ಕೆಲಸ ಮಾಡುವ ಮಾಧ್ಯಮ ಮಿತ್ರರು ನಡೆಸುವ ಬ್ಲಾಗ್ ಸಹ ಯಾವುದೆ ದುರುದ್ದೇಶದಿಂದ ಕೂಡಿರಬಾರದು ಎನ್ನುವುದು ನಮ್ಮ ಕಳಕಳಿ.ಸಮಾಜಕ್ಕೆ ಒಳಿತಾಗುವ ಅವರು ಮಾಡುವ ಯಾವುದೇ ಕೆಲಸಕ್ಕೆ ನಮ್ಮ ಬೆಂಬಲ ಖಂಡಿತ ಇರುತ್ತೆ. ಆದರೆ ಸಾಮಾಜಿಕ ಕಳಕಳಿಯ ಅಡಿಯಲ್ಲಿ ತಮ್ಮಲ್ಲಿರುವ ದ್ವೇಷವನ್ನು ಬಲಪಂತೀಯರ ವಿರುದ್ದ ಲೇಖನ ಬರೆಯುವುದರ ಮೂಲಕ ತೀರಿಸಿಕೊಳ್ಳುವುದು ದುರದೃಷ್ಟಕರ.

    ಪ್ರತ್ಯುತ್ತರಅಳಿಸಿ