ಗುರುವಾರ, ಜುಲೈ 21, 2011

ಸಿ. ಸೋಮಶೇಖರಯ್ಯ ನವರ ಒಂದು ಉತ್ತಮ ಲೇಖನ

ಮಾನ್ಯ ಸಿ.ಸೋಮಶೇಖರಯ್ಯ, ಚಿತ್ರದುರ್ಗ. ರವರು ಬರೆದ

"ಭಗವದ್ಗೀತೆ , ಕೆಲವು ಸತ್ಯ ಮಿಥ್ಯಗಳು"

ಒಂದು ಉತ್ತಮ ಸಂಗ್ರಹಯೋಗ್ಯ ಲೇಖನ.  
ಲೇಖಕರು ಅನನ್ಯ ಅಲ್ಲಮ ಸರಣಿಯ ಖ್ಯಾತ ಬರಹಗಾರರು.
************************
ವರ್ತಮಾನದಲ್ಲಿ ಶಾಲೆಯಲ್ಲಿ ಭಗವದ್ಗೀತೆಯ ಅಭಿಯಾನ ಸರಿಯೇ ತಪ್ಪೆ ? ಎನ್ನುವುದಕ್ಕೆ ಈ ಲೇಖನ ಸಂಬಂಧಿಸಿದ್ದಲ್ಲ . ಶಾಲೆಯಲ್ಲಿ ಭಗವದ್ಗೀತೆಯ ಅಭಿಯಾನಕ್ಕೆ ವಿರೋಧಗಳಿದ್ದರೆ ಅದನ್ನು ಬಲವಂತವಾಗಿ ನಡೆಸಬೇಕಾಗಿಲ್ಲ ,  ಯಾವುದೇ ಅಭಿಯಾನವಿಲ್ಲದೆ ಅದು ರಚನೆಯಾದಂದಿನಿಂದ ಇಂದಿನವರೆಗೆ ಅದು ಅಧ್ಯಯನದ, ಸಂಶೋಧನೆಯ, ಜಿಜ್ಞಾಸೆಯ ಅದ್ಭುತ ಆಕರವಾಗಿ ಮುಂದುವರಿಯುತ್ತಿದೆ ;  ಭಗವದ್ಗೀತೆಯು  ಈ ಎಲ್ಲ ವಿವಾದಗಳಾಚೆಗೆ ಜಗತ್ತಿ ನಾದ್ಯಂತ ಮತ ಪಂಥಗಳ ಎಲ್ಲೆ ಇಲ್ಲದೆ ಜ್ಞಾನದಾಹಿಗಳಾದವರ ತೌಲನಿಕ  ಅಧ್ಯಯನದ ವಸ್ತುವಾಗಿಯೇ ಇದೆ . ಮುಖ್ಯವಾಗಿ ಭಗವದ್ಗೀತೆಯ ಮೇಲಿರುವ ಆಪಾದನೆಗಳು ಇವು 
೧ ಅದು ಹಿಂದೂಗಳ ಧರ್ಮ ಗ್ರಂಥ ಅದನ್ನು ಇತರ ಮತೀಯರ ಮೇಲೆ ಹೇರುವುದು ತಪ್ಪು 
೨ ಭಗವದ್ಗೀತೆ ಒಂದು ಯುದ್ದಕೋರ ಗ್ರಂಥ ,  ಶಾಂತಿಪ್ರಿಯರಿಗೆ ಅದು ಅಧ್ಯಯನ ಯೋಗ್ಯವಲ್ಲ 
೩ ಅದು ವರ್ಣಾಶ್ರಮಗಳನ್ನು ಗಟ್ಟಿಗೊಳಿಸುವ ವೈದಿಕರ ಹುನ್ನಾರ 
ಗೀತೆಯನ್ನು ಅರ್ಧಂಬರ್ಧ ಓದಿದವರು , ಓದಿದರೂ ಪೂರ್ವಾಗ್ರಹಗಳನ್ನುಳ್ಳವರು , ಓದದೆ ಯಾರೋ ಹೇಳಿದ್ದನ್ನು ಪಟ್ಟು ಹಿಡಿದು ಹೇಳುವವರು ಇವರೆಲ್ಲರ ಒಕ್ಕೊರಲಿನ ಕೂಗು ಇದು 
ಈಗ ಮೊದಲನೆಯ ಆಪಾದನೆಯ ವಿಷಯಕ್ಕೆ ಬರೋಣ . ಗೀತೆ ರಚನೆಯಾದ ಕಾಲಕ್ಕೆ ಹಿಂದೂ ಎಂಬ ಪದವೇ ಇರಲಿಲ್ಲ ; ಹಿಂದೂ ಧರ್ಮ ಅಂತನೂ ಯಾವುದೂ ಇರಲಿಲ್ಲ . ಭಾರತೀಯ ಸಾಂಸ್ಕೃತಿಕ ಜಗತ್ತಿನಲ್ಲಿ ನ್ಯಾಯ , ವೈಶೇಷಿಕ , ಸಾಂಖ್ಯ , ಯೋಗ , ಮಿಮಾಂಸ , ವೇದಾಂತ ಎಂಬ ಷಡ್ದರ್ಶನಗಳಿದ್ದವು ; ನಾಸ್ತಿಕವಾದವೂ ಸೇರಿದಂತೆ ಮುಖ್ಯವಾಗಿ  ಶೈವ , ವೈಷ್ನವ , ಶಾಕ್ತ , ಸೌರ , ಗಾಣಪತ್ಯ,  ಕಾಪಾಲಿಕ ಗಳಲ್ಲದೆ ಇನ್ನೂ ಅನೇಕ ಮತ ಪಂಥಗಳಿದ್ದವು . ಇವುಗಳ ವಿಚಾರಗಳು  ಸಾಂದರ್ಭಿಕವಾಗಿ ಗೀತೆಯಲ್ಲಿ ಪ್ರಸ್ತಾಪವಾಗುತ್ತವೆ . ಉಳಿದಂತೆ ಗೀತೆಯ ಇಡಿಯ ಏಳು ನೂರು ಶ್ಲೋಕಗಳಲ್ಲಿ ಯಾವುದೇ ಒಂದು ಮತ ಪಂಥದ ಪರವಾಗಿ ಒಂದೇ ಒಂದು ಮಾತೂ ಸಹ ಬರುವುದಿಲ್ಲ .  ಹಿಂದೂಗಳೆನಿಸಿಕೊಳ್ಳುವವರು ಭಗವದ್ಗೀತೆಯನ್ನು ತಮ್ಮ ಧರ್ಮಗ್ರಂಥವೆಂದುಕೊಂಡರೆ ಅದಕ್ಕೆ ಭಗವದ್ಗೀತೆ ಹೊಣೆಯಲ್ಲ . ಉದಾಹರಣೆಗೆ ಹಿಂದೂ ಎನ್ನುವವರ ನಡುವಣ ತೀವ್ರತರ ತಾತ್ವಿಕ  ವಿರೋಧಿ ಪಂಥಗಳಾದ ದ್ವೈತಿಗಳು , ಅದ್ವೈತಿಗಳು ಇಬ್ಬರೂ ಸಹ  ಗೀತೆ ತಮ್ಮ ವಾದಗಳನ್ನೇ ಎತ್ತಿ ಹಿಡಿಯುತ್ತದೆ ಎಂದು ವಾದಿಸುತ್ತಾರೆ ; ಇನ್ನು ಗೀತೆಯ ಅಧ್ಯಯನ ಮಾಡುವ ಯಾವುದೇ ಮತದ ವ್ಯಕ್ತಿ , ಗೀತೆ ತಮ್ಮ ಮತವನ್ನೇ ಎತ್ತಿ ಹಿಡಿಯುತ್ತದೆ ಎಂದುಕೊಂಡರೆ ಯಾವುದೇ ಆಶ್ಚರ್ಯವಿಲ್ಲ . 
ಇಂದಿನ ಜಗತ್ತಿನಲ್ಲಿ ಮುಂಚೂಣಿಯಲ್ಲಿರುವ ಅನೇಕ ಮತಗಳು ಭಗವದ್ಗೀತೆಯ ರಚನೆಯ ಕಾಲಕ್ಕೆ ಇನ್ನೂ ಕಣ್ಣು ಕೂಡಾ ಬಿಟ್ಟಿರಲಿಲ್ಲ . ಅಂದಮೇಲೆ ಕಾಲಮಾನದ ದೃಷ್ಟಿಯಿಂದ ಗೀತೆಯೊಡನೆ ಅವುಗಳ ಮತಗ್ರಂಥಗಳ ಬಗ್ಗೆ ಹೇಳುವುದಕ್ಕೆ ಏನೂ ಇಲ್ಲ . ಇನ್ನೊಂದು ಮುಖ್ಯ ವಿಷಯವೆಂದರೆ ಇಂದಿನ ಪ್ರಮುಖ ಮತ ಗ್ರಂಥಗಳ ವಿಚಾರಗಳಿಗೂ ,ಭಗವದ್ಗೀತೆಯ ವಿಚಾರಗಳಿಗೂ ಶೇಕಡ ೯೯ ರಷ್ಟು  ಯಾವ ಸಾಮ್ಯವೂ ಇಲ್ಲ .  ಈ ದೃಷ್ಟಿಯಿಂದ ಮತಗ್ರಂಥಗಳ ಸಾಲಿನಲ್ಲಿ ಭಗವದ್ಗೀತೆಯನ್ನು ನಿಲ್ಲಿಸುವುದು ಅಂಥ ಜಾಣತನದ ಲಕ್ಷಣವಲ್ಲ . ಜಾಗತಿಕ ವಿದ್ಯಮಾನಗಳಲ್ಲಿ ಮತಗಳೆಂಬುವು ಪರಸ್ಪರ ಬಡಿದಾಡಿಕೊಂಡು ರಕ್ತ ಹರಿಸಿ ಮನುಕುಲವನ್ನು ಪಿಡುಗಿನಂತೆ ಕಾಡತೊಡಗಿದಾಗ, ವಿಚಾರವಂತರು ಜಾತ್ಯತೀತತೆಯ ಹೊರತು ಮನುಕುಲಕ್ಕೆ ಉಳಿಗಾಲವಿಲ್ಲವೆಂದು ಪ್ರತಿಪಾದಿಸಲು ತೊಡಗುವ ಸಾವಿರಾರು ವರ್ಷಕ್ಕೆ ಮೊದಲೇ ಮತಾತೀತ ತತ್ವಗಳನ್ನು ಪ್ರತಿಪಾದಿಸಿದ ಗೀತೆಯ ಬಗ್ಗೆ  ವಿವೇಚನಾಪೂರ್ವಕವಾಗಿ  ವಿವೇಚಿಸಿದರೆ ಅದು  ಮೊತ್ತ ಮೊದಲ ಜಾತ್ಯಾತೀತ ಗ್ರಂಥವಾಗಿಬಿಡುತ್ತದೆ . ಇಲ್ಲದೆ ಹೋದರೆ ಜಾತ್ಯಾತೀತ ತತ್ವಗಳನ್ನು ಅನುಷ್ಟಾನಕ್ಕೆ ತರಲು ಹೆಣಗಿದ ಮಹಾತ್ಮ ಗಾಂಧೀಜಿಯಂತಹವರು ಮಾರ್ಗದರ್ಶನಕ್ಕೆ ಗೀತೆಯ ಮೊರೆ ಹೋಗುತ್ತಿರಲಿಲ್ಲ  . ಅಷ್ಟೇ ಅಲ್ಲ ಮನುಷ್ಯನ ಬುದ್ದಿಶಕ್ತಿಗೆ ,  ವಿವೇಚನಾಸಾಮರ್ಥ್ಯಕ್ಕೆ ಗೀತೆ ನೀಡಿದಷ್ಟು ಗೌರವವನ್ನು ಇತರ ಕಡೆ ಹುಡುಕುವುದು ಕಷ್ಟ .
ಎರಡನೆಯ ಆಪಾದನೆ ಮಾಡುವವರು  ಒಳ್ಳೆಯವರು ಮತ್ತು ಬುದ್ದಿವಂತರು  , ಆ ಬುದ್ದಿವಂತರಲ್ಲಿಯೂ ಗೀತೆಯನ್ನು ಓದುವುದಿರಲಿ ಎಂದೂ ಕಣ್ಣಿನಿಂದ ಸಹ ನೋಡದೆ ಅದನ್ನು ಟೀಕಿಸುವ ಮಹಾನುಭಾವರನ್ನು ನಾನು ನೋಡಿ ಆಶ್ಚರ್ಯಪಟ್ಟಿದ್ದೇನೆ . ಅವರ ಆಪಾದನೆ ಇಷ್ಟು . ’ ಪಾಪ ಅರ್ಜುನ ಯುದ್ದ ಬೇಡ ಎನ್ನುವಾಗ , ಈ ಕೃಷ್ಣ ಯುದ್ದ ಮಾಡು ಎಂದು ಪ್ರಚೋದಿಸುವ ಅವಶ್ಯಕತೆ ಏನಿತ್ತು ? ಎಂಬ ನ್ಯಾಯವಾದ ಪ್ರಶ್ನೆ ಅವರದು . ಹೌದು , ಯುದ್ದ ಯಾರಿಗೆ ಬೇಕು ? ಅದು ಕ್ರೌರ್ಯದ ಪರಮಾವಧಿ . ರಕ್ತದೋಕುಳಿಯ , ಮಾರಣಹೋಮದ ವಿಕೃತ ಆಟ ಅದು . ಯಾವ ವಿಚಾರವಂತನೂ ಅದನ್ನು ಸಮರ್ಥಿಸಲು ಸಾಧ್ಯವಿಲ್ಲ . ಇದೆಲ್ಲ ಸರಿಯೆ, ಆದರೆ ಸತ್ಯ ಬೇರೆಯೇ ಇದೆ ! ಮನುಷ್ಯ ಎಂಬ ಪ್ರಾಣಿ ಮೂಲತಃ ಯುದ್ದಕೋರ . ಜಗತ್ತಿನಲ್ಲಿ ಮಾನವ ಹೊರಹೊಮ್ಮಿದ ನಂತರ ಇಂದಿನ ವರೆಗೆ ಒಂದು ದಿನವಾದರೂ ಯುದ್ದ ಎಂಬುದು ಜಗತ್ತಿನ ಯಾವ ಮೂಲೆಯಲ್ಲಾದರೂ ಒಂದಲ್ಲಾ ಒಂದು ಕಡೆ ನಡೆಯದೆ ನಿಂತಿದೆಯೇ ? ಎಂಬ ಪ್ರಶ್ನೆಗೆ ಉತ್ತರ ಮಾತ್ರ ಕಷ್ಟ  . ಹಾಗಾದರೆ ಮನುಷ್ಯರಿಗೆ ಅದು ಅನಿವಾರ್ಯ ಪಿಡುಗು . ಎಂತಹ ಶಾಂತಿದೂತನೂ ದುರದೃಷ್ಟದಿಂದ ಈ ಸಾವಿನ ಆಟಕ್ಕೆ ಮುಖಾಮುಖಿಯಾಗುವ ಸಂದರ್ಭ ಬರಬಹುದು . 
ಗೀತೆ ಮಹಾಭಾರತದ ಭೀಷ್ಮಪರ್ವದಲ್ಲಿ ಯುದ್ದೋನ್ಮಾದದ ಎದುರಿನಲ್ಲಿ ಮೈದಳೆದ ವೈಚಾರಿಕ ಸರಮಾಲೆ . ಅಂದು ಎದುರಾದ ಮಹಾ ಸಂಗ್ರಾಮ ಅಂದಿನ ಆಕಸ್ಮಿಕವಲ್ಲ ಅನೇಕ ವರ್ಷಗಳ ಹಿಂದಿನಿಂದ ವ್ಯೂಹಾತ್ಮಕವಾಗಿ ರಚನೆಗೊಂಡ ಹಿಂಸಾತ್ಮಕ ರಣಕೇಳಿ ಅದು . ಅದನ್ನು ತಪ್ಪಿಸಲು ಯಾರೂ ಪ್ರಯತ್ನಿಸಲೇ ಇಲ್ಲವೆ ? ಎನ್ನುವವರು ಮಹಾ ಭಾರತದ ಇತರ ಪರ್ವಗಳ ಕಡೆಗೆ ಗಮನ ಹರಿಸಬೇಕು , ಉದ್ಯೋಗ ಪರ್ವದಲ್ಲಿ ಯುದ್ದ ನಿಲುಗಡೆಗೆ ಸಕಲ ಪ್ರಯತ್ನಗಳೂ ನಡೆಯುತ್ತವೆ . ಪಾಂಡವರಿಗೆ ದಾಯಭಾಗವಿರಲಿ ಕನಿಷ್ಟ ಐದು ಗ್ರಾಮಗಳನ್ನು ನೀಡುವಂತೆ ಮನ ಒಲಿಸುವ ಪ್ರಯತ್ನಗಳು ನಡೆಯುತ್ತವೆ ; ಫಲಕಾರಿಯಾಗುವುದಿಲ್ಲ . ವಿರಾಟಪರ್ವದಲ್ಲಿಯೇ ಪಾಂಡವರನ್ನು ನಿರ್ನಾಮಗೊಳಿಸುವ  ಉದ್ದೇಶದಿಂದ , ಮುಂದಿನ ಮಹಾಭಾರತದ ಯುದ್ದದ ಮುನ್ನುಡಿಯೆಂಬಂತೆ ಉತ್ತರ ಗೋಗ್ರಹಣದ ಯುದ್ದ ಸಂಭವಿಸುತ್ತದೆ , ಆ ಯುದ್ದವನ್ನು ಪಾಂಡವರು ಗೆಲ್ಲುತ್ತಾರೆ . ಒಂದು ಹನಿ ರಕ್ತ ಕೂಡಾ ಭೂಮಿಗೆ ಬೀಳದಂತೆ ! ಇಷ್ಟೊಂದು ಶಾಂತಿಪ್ರಿಯ ಕ್ರಮಗಳು ವ್ಯರ್ಥವಾಗುವಂತೆ ಮಹಾಭಾರತ ಯುದ್ದವೆಂಬ ಜಗತ್ತಿನ ಮೊದಲ ಮಹಾ ಸಂಗ್ರಾಮ ನಡೆದೇ ಹೋಗುತ್ತದೆ . 
ಯುದ್ದ ಮುಖಾಮುಖಿಯಾದಾಗ ಕೃಷ್ಣ ಹೇಳುವುದಾದರೂ ಏನನ್ನು ? ’ ಸಂಭಾವಿತಸ್ಯಚಾಕೀರ್ತಿರ್ಮರಣಾದತಿರಿಚ್ಯತೆ’  ಎಂಬ ಮಾತನ್ನು ಸಂಭಾವಿತನಿಗೆ ಕೀರ್ತಿನಾಶವಾಗುವುದು ಮರಣಕ್ಕಿಂತ ಹೀನವಾದುದು ಎಂದು . ನಿಮ್ಮ ಮನೆಗೆ ದರೋಡೆಕೋರರು ನುಗ್ಗಿದ್ದಾರೆ , ಹೆಂಗಸರು ಮಕ್ಕಳನ್ನು ಬಿಟ್ಟು ನೀವು ಪಲಾಯನ ಮಾಡಿದರೆ ನಿಮ್ಮ ಕುಟುಂಬದ ದೃಷ್ಟಿಯಲ್ಲಿ ನಿಮ್ಮ ಹಣೆಬರಹ ಏನಾಗುತ್ತದೆ ? ಇದೇ ಕೃಷ್ಣ ಎತ್ತುವ ಪ್ರಶ್ನೆ . ಮುಂಬಯಿಯ ಮೇಲೆ ಬಾಂಬ್ ದಾಳಿಯಾಗುತ್ತದೆ ದಾಳಿಕಾರರನ್ನು ಹಿಡಿದು ಶಿಕ್ಷಿಸಬಾರದೆ ? ಹಾಗೆ ಮಾಡದಿದ್ದಲ್ಲಿ ಅಂಥಹ ಘಟನೆಗಳು ಮರುಕಳಿಸಿ ಅರಾಜಕವಾಗುವುದಿಲ್ಲವೆ ? ಹೋಗಲಿ ಮೂರ್ಖರ ಇಂಥ ದಾಳಿಗಳಿಗೆ ಜೀವ ತೆರುವ ಅಮಾಯಕರು ಮಾಡಿದ ತಪ್ಪೇನು?  ಅವರನ್ನು ರಕ್ಷಿಸುವುದು ಆಡಳಿತದ ಹೊಣೆಯಲ್ಲವೆ ? ಇಂತಹ ಅನೇಕ ಧರ್ಮ ಸೂಕ್ಷ್ಮಗಳು ಈ ಯುದ್ದ , ಕಾಳಗ ಮುಂತಾದುವುಗಳ ಹೆಜ್ಜೆ ಹೆಜ್ಜೆಗಳಲ್ಲಿವೆ ಇವು ಭಾಷಣ ಮಾಡುವಷ್ಟು ಸುಲಭದ ವಿಚಾರಗಳಲ್ಲ . ಇಷ್ಟಕ್ಕೂ ಗೀತೆ ಕಾಲುಕೆರೆದು ಜಗಳ ಮಾಡಲು ಅಥವಾ ತಮ್ಮ ವಿಚಾರಗಳನ್ನು ಒಪ್ಪದವರನ್ನು ಕೊಂದು ಹಾಕುವಂತೆ ಎಲ್ಲಿಯೂ  ಪ್ರಚೋದಿಸುವುದಿಲ್ಲ . ಯುದ್ದ ಸನ್ನಿವೇಶದಲ್ಲಿ ಆರಂಭವಾದ ಗೀತೆ ಉದ್ದಕ್ಕೂ ಪ್ರತಿಪಾದಿಸುವುದು ಅಹಿಂಸಾತ್ಮಕ ವಾತಾವರಣವನ್ನು ಮತ್ತು ಶಾಂತಿಪ್ರಿಯತೆಯನ್ನು ತಾಳ್ಮೆಯಿಂದ ಪೂರ್ವಾಗ್ರಹಗಳಿಲ್ಲದೆ ಅಧ್ಯಯನ ಮಾಡಬೇಕು ಅಷ್ಟೆ .’ಅದ್ವೇಷ್ಟಾ ಸರ್ವಭೂತಾನಾಂ ಮೈತ್ರಃ ಕರುಣಏವ”  ಜಗತ್ತಿನ ಸಕಲ ಪ್ರಾಣಿಗಳಲ್ಲಿ ಮೈತ್ರಿ ಕರುಣೆಯನ್ನು ಬೆಳಸಿಕೊಂಡರೆ ಮನಸ್ಸಿಗೆ ಖಾಯಿಲೆಗಳಿರುವುದಿಲ್ಲ ಎನ್ನುವ ಗೀತೆ ಯಾವ ರೀತಿಯ ಕ್ರೌರ್ಯವನ್ನು ಬೋಧಿಸೀತು ? 
ಮೂರನೆಯದು ವರ್ಣಾಶ್ರಮಗಳನ್ನು ಹೇರುವ ಹುನ್ನಾರ ಎಂಬಮಾತು , ನಿಜಕ್ಕೂ ಇದೊಂದು ಹಾಸ್ಯಾಸ್ಪದ ವಿಚಾರ . ಗೀತೆಯ ರಚನೆಯ ಕಾಲಕ್ಕೆ ಭಾರತದಲ್ಲಿ ವರ್ಣಾಶ್ರಮ ವ್ಯವಸ್ಥೆ ಇದ್ದಿತು . ಆದರೆ  ಇಡೀ ಗೀತೆಯಲ್ಲಿ ವರ್ಣಾಶ್ರಮಗಳ ನೇರ ಪ್ರಸ್ತಾಪ ಬರುವುದು ಎರಡುಕಡೆ ಮಾತ್ರ , ಮೊದಲನೆಯ ಸಾರಿ ಯಾಕೆ ಯುದ್ದ ಬೇಡ ಎಂಬ ವಿಷಯಕ್ಕೆ ಅರ್ಜುನ ಕೊಡುವ ಕಾರಣಗಳಲ್ಲಿ ’ವರ್ಣಾಶ್ರಮಗಳು ಹಾಳಾಗುತ್ತವ” ಎಂಬುದು ಒಂದು , ’ವರ್ಣಾಶ್ರಮಗಳು ಹಾಳಾದರೆ ಸ್ತ್ರೀಯರು ಕೆಡುತ್ತಾರ” ಎಂಬ ಬಾಲಿಶ ಅದಾಹರಣೆಗಳು ಇದೆಲ್ಲವನ್ನೂ ಕೇಳಿ ಕೃಷ್ಣ ನಗುತ್ತಾನೆ ಅಷ್ಟೆ . ಇನ್ನೊಮ್ಮೆ ’ನಾಲ್ಕೂ ವರ್ಣಗಳೂ ನನ್ನಿಂದಲೇ ಸೃಷ್ಟಿಯಾದವು ವ್ಯಕ್ತಿಗಳ ಗುಣ ಕರ್ಮ ಸ್ವಭಾವಗಳ  ಕಾರಣದಿಂದ ” ಎಂಬ ಕೃಷ್ಣನ ಬಾಯಿಂದಲೇ ಬರುವ ಮಾತು , ವೈಜ್ಞಾನಿಕವಾಗಿ ನೇರವಾಗಿ ಅರ್ಥ ಮಾಡಿಕೊಂಡರೆ ; ಜಗತ್ತಿನ ವಸ್ತು ಸ್ಥಿತಿಯನ್ನು ವಸ್ತು ನಿಷ್ಟವಾಗಿ ಗ್ರಹಿಸಿದರೆ  ಕೃಷ್ಣನ ಈ ಮಾತುಗಳ ಹಿಂದಿನ ಸತ್ಯ ಅರ್ಥವಾಗುತ್ತದೆ . ಇನ್ನೆಲ್ಲಿಯೂ ಗೀತೆಯಲ್ಲಿ ಈ ವಿಷಯವಿಲ್ಲ ; ವರ್ಣಾಶ್ರಮಗಳ ಸಮರ್ಥನೆಯಂತೂ ಮೊದಲೇ ಇಲ್ಲ . ಅದು ಹೇಳುವುದು ಸಕಲ ಮಾನವರೂ ಜ್ಞಾನಿಯ ದೃಷ್ಟಿಯಲ್ಲಿ ಸಮಾನರು ಎಂಬ ಮಾತನ್ನು ಮಾನವರು ಮಾತ್ರವಲ್ಲ ಪ್ರಾಣಿಗಳೂ ಸಹ . ಆದುದರಿಂದ ಈ ಭೂಮಿಯ ಸಕಲ ಜೀವ ಜಾತವನ್ನೂ ಮನುಷ್ಯ ಪ್ರೀತಿಸಬೇಕು ಎನ್ನುವ ಘೋಷ ವಾಕ್ಯಗಳನ್ನು 
ಹಾಗಾದರೆ ಗೀತೆಯಲ್ಲಿ ಪ್ರತಿಪಾದಿತವಾಗಿರುವ ವಿಷಯವಾದರೂ ಯಾವುದು ? ಗೀತೆಯ ಕನಿಷ್ಟ ಐನೂರು ಶ್ಲೋಕಗಳಲ್ಲಿ ಬರುವುದು ಮನುಷ್ಯನ ಚಿತ್ರ ವಿಚಿತ್ರ ಸ್ವಭಾವದ ಬಗ್ಗೆ ; ಅವನ ಮನಸ್ಸು ಚಿಂತಿಸುವ , ಆಶಿಸುವ ಪ್ರಲೋಭನೆಗಳಿಗೆ ಒಳಗಾಗುವ ರೀತಿಯ ಬಗ್ಗೆ ; ಅದರಿಂದಾಗಿ ಕ್ಷೋಭೆಗೊಳಗಾಗುವ ಬಗ್ಗೆ  ಮತ್ತು ಮನಸ್ಸು ದಾರಿ ತಪ್ಪಿದಾಗ ಅದನ್ನು ನಿಯಂತ್ರಿಸುವ ಉಪಾಯಗಳ ಬಗ್ಗೆ . ಹಿಗಾಗಿ ಮೊದಲನೆಯದಾಗಿ  ಗೀತೆ ಒಂದು ವೈಜ್ಞಾನಿಕ ಮನಃಶಾಸ್ತ್ರೀಯ ಗ್ರಂಥ , ತದನಂತರ ಒಂದು ತತ್ವ ಜಿಜ್ಞಾಸೆಯ ಗ್ರಂಥ ; ಮನುಷ್ಯನ ಸ್ವಾತಂತ್ರ್ಯ, ಅಭಿವ್ಯಕ್ತಿಗಳಿಗೆ ಒತ್ತು ಕೊಡುವ ಗ್ರಂಥ . ಆಧುನಿಕ  ನಾಗರಿಕ ಜಗತ್ತು ಈ ವಿಷಯಗಳನ್ನು ಪ್ರತಿಪಾದಿಸುವ ಸಾವಿರಾರು ವರ್ಷಗಳ ಹಿಂದೆಯೇ ಆಶ್ಚರ್ಯವೆನ್ನುವಂತೆ ಈ ವಿಷಯಗಳೆಲ್ಲ ಗೀತೆಯಲ್ಲಿ ಪ್ರತಿಪಾದಿತವಾಗಿವೆ . ಗೀತೆಯೇ ಹೇಳುವಂತೆ ಎಲ್ಲರಿಗೂ ಗೀತೆಯನ್ನು ವಿಮರ್ಶಿಸಿ ಟೀಕಿಸುವ ಹಕ್ಕಿದೆ . ಆ ಹಕ್ಕನ್ನು ನಾವು ದುರುಪಯೋಗಪಡಿಸಿಕೊಳ್ಳದೆ , ಅಧ್ಯಯನ ಮಾಡಿ ನಂತರ ಟೀಕಿಸುವ ವಿಮರ್ಶಿಸುವ ಹಕ್ಕನ್ನು ಚಲಾಯಿಸುವುದು ಉತ್ತಮ
*********************************

1 ಕಾಮೆಂಟ್‌: