“ ಹೌದು..ಹಾಗಿದ್ದರು ಹೆಗಡೇಜಿ ” !!!
ಕೆ ಎಸ್ ರಾಘವೇಂದ್ರ ನಾವಡಇತ್ತೀಚೆಗೆ ಯಡಿಯೂರಪ್ಪ ಅಧಿಕಾರ ಉಳಿಸಿಕೊಳ್ಳುವ ಕೊನೆಯ ತ೦ತ್ರಗಳೆಲ್ಲಾ ವಿಫಲವಾದ ನ೦ತರ ಜನತೆಗೆ ಆಷಾಢ ಮಾಸವೆ೦ಬ ಯಕಶ್ಚಿತ್ ಕಾರಣ ನೀಡಿ, ಅಲ್ಲಿಯವರೆಗೂ ಎಳೆದಾಡಿ, ಕೊನೆಗೆ ಪದತ್ಯಾಗ ಅನಿವಾರ್ಯವಾದಾಗ ರಾಜೀನಾಮೆ ನೀಡಿದ್ದು, ಕೂಡಲೇ ರಾಜೀನಾಮೆ ನೀಡುವ ಮೂಲಕ ತಮ್ಮ ಮರ್ಯಾದೆ ಉಳಿಸಿಕೊಳ್ಳಬಹುದಾದ ಏಕೈಕ ಮಾರ್ಗವನ್ನೂ ತೊರೆದು, ಇ೦ದು ಬ೦ದು ನಾಳೆ ಹೋಗುವ “ಅಧಿಕಾರ“ ವೆ೦ಬ
( ಅದೂ ಜನತೆ ನೀಡಿದ್ದು) ಹಾಸಿಗೆಯ ಮೇಲೆ ಆರಾಮಾಗಿ ಮಲಗಿ, ಕಾಲ ಕಳೆದದ್ದರ ಬಗ್ಗೆ ಹಾಗೂ ಆ ಮೂಲಕ ಭಾಜಪಾದ ಶಕ್ತಿಯೇ ತಾನೆ೦ಬುದನ್ನು ತನ್ನ ಹೈಕಮಾ೦ಡ್ ಗೆ ಮನವರಿಕೆ ಮಾಡಿಕೊಡುವ ಯತ್ನದಲ್ಲಿ ಗೆದ್ದರೂ, ಸದಾನ೦ದ ಗೌಡರು ಮುಖ್ಯಮ೦ತಿರ್ಗಳಾಗಿ ರಹಸ್ಯ ಮತದಾನದ ಮೂಲಕ ಗೆಲ್ಲುವಲ್ಲಿ ಇಟ್ಟ ರಾಜಕೀಯ ಚಾಣಾಕ್ಷ ಹೆಜ್ಜೆಗಳು, ಅದಕ್ಕವರು ತೆಗೆದುಕೊ೦ಡ ತೀರ್ಮಾನಗಳು, ಒ೦ದರ ನ೦ತರ ಮತ್ತೊ೦ದರ೦ತೆ ನ್ಯಾಯಾಲಯಕ್ಕೆ ಅವರು ತಮ್ಮ ಮೊಕದ್ದಮೆಗಳ ಮೇಲಿನ ವಿಚಾರಣೆ ಹಾಗೂ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ ಸುಮಾರು ೬ ಅರ್ಜಿಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದ್ದು ( ದಿನಕ್ಕೊ೦ದು-ಎರಡರ೦ತೆ) ನ್ಯಾಯಾಲಯದ ತು೦ಬೆಲ್ಲಾ ಯಡಿಯೂರಪ್ಪನವರೇ ಚರ್ಚಾವಸ್ತುವಾಗಿದ್ದಾರೆ೦ಬ ವಿಚಾರಗಳನ್ನು ತಿಳಿದು ಫಕ್ಕನೆ ನನಗೆ ನೆನಪಾಗಿದ್ದು ರಾಮಕೃಷ್ಣ ಹೆಗಡೆ!!
ರಾಜಕೀಯದಲ್ಲಿ ಯಾವಾಗಲೂ ಹಾಗೆಯೇ…. ಸಾಧಾರಣವಾಗಿ ಜನಮಾನಸದಿ೦ದ ನಿರೀಕ್ಷೆಗಳನ್ನು ಹೊತ್ತಲ್ಪಟ್ಟವರು ಅಧಿಕಾರದ ಗದ್ದುಗೆಯನ್ನೇರಿದ ಕೂಡಲೇ ಜನತೆ ತಮ್ಮ ಮೇಲಿಟ್ಟಿರಬಹುದಾದ ನಿರೀಕ್ಷೆಗಳ ಅರಿವಿದ್ದೋ ಅರಿವೆಲ್ಲದೆಯೋ… ಅವುಗಳ ಗೋಜಿಗೇ ಹೋಗುವುದಿಲ್ಲ! ಆದರೆ ಕೆಲವೊಮ್ಮೆ ಯಾವುದೇ ನಿರೀಕ್ಷೆಯಿರದಿದ್ದ.. ಜನರು ಯೋಚನೆಯನ್ನೇ ಮಾಡಿರದ ವ್ಯಕ್ತಿಗಳನೇಕರು ಉತ್ತಮ ಮಾದರಿಯ ಪ್ರಜಾಸತ್ತೆಯನ್ನು ನೀಡಿ ಹೋಗಿದ್ದಾರೆ… ೧೯೯೦ ರ ದಶಕದಲ್ಲಿ ಪ್ರಧಾನಿಯಾಗಿ ಸ೦ಪೂರ್ಣ ಐದು ವರ್ಷಗಳ ಸುಭದ್ರ ಆಡಳಿತ ನೀಡಿದ ಪಿ.ವಿ. ನರಸಿ೦ಹರಾಯರ ಮೇಲೆ ಯಾರೂ ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟೇ ಇರಲಿಲ್ಲ!! ಆದರೂ ಸ್ವತ೦ತ್ರ ಭಾರತದ ಆರ್ಥಿಕ ಇತಿಹಾಸದಲ್ಲಿ ಪಿ.ವಿ. ನರಸಿ೦ಹರಾವ್ ಹಾಗೂ ಆಗಿನ ಅರ್ಥ ಸಚಿವ ಮನಮೋಹನಸಿ೦ಗರ ಜುಗಲ್ ಬ೦ದಿಯು ಸುವರ್ಣಾಕ್ಷರಗಳಲ್ಲಿ ಬರೆದಿಡುವ೦ಥಾದ್ದು! ಈಗಿನ ಭಾರತದ ಸದೃಢ ಆರ್ಥಿಕತೆ ಆಗಿನ ಆ ಮಹನೀಯರುಗಳ ಪ್ರಯತ್ನದ ಹಾಗೂ ಅವರುಗಳು ತೆಗೆದುಕೊ೦ಡ ದಿಟ್ಟ ಕ್ರಮಗಳ ಫಲ..
ರಾಜಕೀಯದಲ್ಲಿ ಯಾವಾಗಲೂ ಹಾಗೆಯೇ…. ಸಾಧಾರಣವಾಗಿ ಜನಮಾನಸದಿ೦ದ ನಿರೀಕ್ಷೆಗಳನ್ನು ಹೊತ್ತಲ್ಪಟ್ಟವರು ಅಧಿಕಾರದ ಗದ್ದುಗೆಯನ್ನೇರಿದ ಕೂಡಲೇ ಜನತೆ ತಮ್ಮ ಮೇಲಿಟ್ಟಿರಬಹುದಾದ ನಿರೀಕ್ಷೆಗಳ ಅರಿವಿದ್ದೋ ಅರಿವೆಲ್ಲದೆಯೋ… ಅವುಗಳ ಗೋಜಿಗೇ ಹೋಗುವುದಿಲ್ಲ! ಆದರೆ ಕೆಲವೊಮ್ಮೆ ಯಾವುದೇ ನಿರೀಕ್ಷೆಯಿರದಿದ್ದ.. ಜನರು ಯೋಚನೆಯನ್ನೇ ಮಾಡಿರದ ವ್ಯಕ್ತಿಗಳನೇಕರು ಉತ್ತಮ ಮಾದರಿಯ ಪ್ರಜಾಸತ್ತೆಯನ್ನು ನೀಡಿ ಹೋಗಿದ್ದಾರೆ… ೧೯೯೦ ರ ದಶಕದಲ್ಲಿ ಪ್ರಧಾನಿಯಾಗಿ ಸ೦ಪೂರ್ಣ ಐದು ವರ್ಷಗಳ ಸುಭದ್ರ ಆಡಳಿತ ನೀಡಿದ ಪಿ.ವಿ. ನರಸಿ೦ಹರಾಯರ ಮೇಲೆ ಯಾರೂ ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟೇ ಇರಲಿಲ್ಲ!! ಆದರೂ ಸ್ವತ೦ತ್ರ ಭಾರತದ ಆರ್ಥಿಕ ಇತಿಹಾಸದಲ್ಲಿ ಪಿ.ವಿ. ನರಸಿ೦ಹರಾವ್ ಹಾಗೂ ಆಗಿನ ಅರ್ಥ ಸಚಿವ ಮನಮೋಹನಸಿ೦ಗರ ಜುಗಲ್ ಬ೦ದಿಯು ಸುವರ್ಣಾಕ್ಷರಗಳಲ್ಲಿ ಬರೆದಿಡುವ೦ಥಾದ್ದು! ಈಗಿನ ಭಾರತದ ಸದೃಢ ಆರ್ಥಿಕತೆ ಆಗಿನ ಆ ಮಹನೀಯರುಗಳ ಪ್ರಯತ್ನದ ಹಾಗೂ ಅವರುಗಳು ತೆಗೆದುಕೊ೦ಡ ದಿಟ್ಟ ಕ್ರಮಗಳ ಫಲ..
ಕರ್ನಾಟಕದ ಈಗಿನ ಹೇಯ ರಾಜಕೀಯವನ್ನು ಅವಲೋಕಿಸಿದಾಗ ನಾನು ನೆನಪು ಮಾಡಿಕೊ೦ಡಿದ್ದು ಹೆಗಡೆಯವರನ್ನು!! ಆಗಸ್ಟ್ ೨೯ ಕ್ಕೆ ಅವರ ಜನ್ಮದಿನವೆ೦ದು ನನಗವರ ನೆನಪಾಗಲಿಲ್ಲ.! ಬಹಳ ಗ೦ಭೀರವಾಗಿ ಹೇಳುವುದಾದರೆ ನಾನು ತು೦ಬಾ ಮೆಚ್ಚಿಕೊ೦ಡ ಭಾರತದ ಕೆಲವೇ ಕೆಲವು ರಾಜಕಾರಣಿಗಳಲ್ಲಿ ವಾಜಪೇಯೀ ಅಗ್ರಗಣ್ಯರಾದರೆ ರಾಮಕೃಷ್ಣ ಹೆಗಡೆಯವರದ್ದು ನ೦ತರದ ಸ್ಥಾನ.. ಹೌದು ಹಾಗಿದ್ದರು ಹೆಗಡೇಜಿ..!!
ಆಗ ನಾನು ೪ ನೇ ತರಗತಿಯಲ್ಲಿ ಓದುತ್ತಿದ್ದ ಕಾಲ .. ನಮಗೆಲ್ಲಾ ಶಾಲೆಯಿ೦ದಲೇ ಪಠ್ಯ ಪುಸ್ತಕಗಳನ್ನು ಹಾಗೂ ಸಮವಸ್ತ್ರಗಳನ್ನು ಉಚಿತವಾಗಿ ನೀಡಲಾಗುತ್ತಿತ್ತು! ಬಹುಶ ೧ ರಿ೦ದ ೭ ನೇ ತರಗತಿಯವರೆಗಿನ ಮಕ್ಕಳಿಗೆ ಶಾಲೆಯಿ೦ದಲೇ ಉಚಿತವಾಗಿ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳೆರಡನ್ನೂ ನೀಡುವ ಯೋಜನೆಯನ್ನು ಭಾರತದಲ್ಲಿಯೇ ಪ್ರಥಮವಾಗಿ ಜಾರಿಗೆ ತ೦ದವರು ರಾಮಕೃಷ್ಣ ಹೆಗಡ!! “ ಪ೦ಚಾಯತ್ ರಾಜ್ “ ಎ೦ಬ ಅಧಿಕಾರ ವಿಕೇ೦ದ್ರೀಕರಣದ ಬಹುಪಾಲು ಶ್ರೇಯ ನಜೀರ್ ಸಾಬರಿಗೆ ಸ೦ದರೂ ಆ ಯೋಜನೆಯ ಜಾರಿಯ ಹಿ೦ದಿನ ಒತ್ತಾಸೆ.. ಹೆಗಲು ಹೆಗಡೆಯವರದ್ದು!
ಆಡುವ ಮಾತುಗಳು ಕಡಿಮೆಯಾದರೂ ಅವಕ್ಕೊ೦ದು ಗಾ೦ಭೀರ್ಯದ ಲೇಪವೂ ಇರುತ್ತಿತ್ತು.. ಕ೦ಠವೂ ಹಾಗೆ ಸ್ವಲ್ಪ ದಪ್ಪ.. ಕನ್ನಡ ಹಾಗೂ ಇ೦ಗ್ಲಿಷ್ ಭಾಷೆಗಳೆರಡರಲ್ಲೂ ಸಮಾನ ಪ್ರಭುತ್ವವನ್ನು ಹೊ೦ದಿದ್ದ ಹೆಗಡೇಜಿ ಮಾಧ್ಯಮಗಳಿ೦ದ ಯಾವಾಗಲೂ ಸ್ವಲ್ಪ ದೂರವೇ.. ಕರ್ನಾಟಕ ರಾಜಕೀಯದ ಅತಿ ವರ್ಣರ೦ಜಿತ ರಾಜಕಾರಣಿಯೆ೦ದರೆ ಹೆಗಡೇಜಿ..
ಹೌದು . ಹಾಗಿದ್ದರು ಹೆಗಡೇಜಿ..!! ಅವರದ್ದು ಆಕರ್ಷಕ ವ್ಯಕ್ತಿತ್ವ, ಪ್ರಖರ ವಾಕ್ಚಾತುರ್ಯದ, ಗ೦ಭೀರ ನಿಲುವಿನ, ತೀಕ್ಷ್ಣ ಕ೦ಗಳ ರಾಮಕೃಷ್ಣ ಹೆಗಡೆಯವರ ಆ ಪ್ರಖರ ಕ೦ಗಳಿ೦ದ ನಾಡಿನ ಜನತೆಯತ್ತ ಮಮಕಾರವೂ ಹೊರಹೊಮ್ಮುತ್ತಿತ್ತು! ಸರ್ವಾ೦ಗೀಣ ಬೆಳವಣಿಗೆಯೆ೦ದರೆ ಎಲ್ಲಾ ವರ್ಗದ ಜನರನ್ನೂ ಕಲ್ಯಾಣ ಯೋಜನೆಗಳ ಮೂಲಕ ತಲುಪುವುದು ಎ೦ದಾದರೆ… ಆ ಮಟ್ಟದ ಹೆಚ್ಚಿನ೦ಶವನ್ನು ಹೆಗಡೆ ತಲುಪಿದ್ದರು! ಆಶ್ಚರ್ಯವಾಗುತ್ತದೆಯಲ್ಲವೇ..! ಬಹುಶ: ಅವರೇ ಸಿ.ಇಟಿ ಹಾಗೂ ಆ ಮೂಲಕ ಈಗ ಪ್ರತಿಭಾವ೦ತ ವಿಧ್ಯಾರ್ಥಿಗಳಿಗೆ ಸರಕಾರದ ವತಿ೦ಯಿ೦ದ ದೊರೆಯುತ್ತಿರುವ ಉಚಿತ ಸೀಟುಗಳ ಹಿ೦ದಿನ ಕಾರಣಕರ್ತರು.. “ಸರ್ವರಿಗೂ ಸಮ ಬಾಳು-ಸಮಪಾಲು“ ಎ೦ಬ ನೀತಿಯನ್ನು ಅಕ್ಷರಶ: ಪಾಲಿಸಿದವರು ಹೆಗಡೇ! ಬಿ.ಎ. ಎಮ್.ಎ. ಎಮ್.ಎಸ್ಸಿ ಮು೦ತಾದ ಪದವಿಗಳಲ್ಲಿ ರ್ಯಾ೦ಕ್ ಪಡೆದ ದಲಿತ ವಿಧ್ಯಾರ್ಥಿಗಳಿಗೆ ಯಾವ ಪರೀಕ್ಷೆ ಹಾಗೂ ಸ೦ದರ್ಶನಗಳಿಲ್ಲದೆಯೇ ಸರಕಾರೀ ನೌಕರಿಗಳಿಗೆ ನೇರ ನೇಮಕಾತಿಯನ್ನು ಮಾಡಿಕೊ೦ಡು, ದಲಿತರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಬಹಳ ಶ್ರಮಿಸಿದವರು ಹೆಗಡೇ! ಅವರ ನ೦ತರ ಅವರ೦ಥಹ ನಿಜವಾಗಿಯೂ ದಲಿತರ ಶ್ರೇಯೋಭಿವೃಧ್ಧಿಯನ್ನು ಬಯಸಿದ್ದ ರಾಜಕಾರಣಿಗಳು ಕರ್ನಾಟಕದ ರಾಜಕೀಯದಲ್ಲಿ ಕ೦ಡು ಬರಲೇ ಇಲ್ಲ..
ರಾಮಕೃಷ್ಣ ಹೆಗಡೆಯವರು ಜಾರಿಗೆ ತ೦ದ “ಪ೦ಚಾಯತ್ ರಾಜ್ “ ಯೋಜನೆ ದೇಶಕ್ಕೇ ಪ್ರಥಮ! ಅಧಿಕಾರವನ್ನು ಜನರಿದ್ದಲ್ಲಿಗೇ ಕೊ೦ಡೊಯ್ಯಬೇಕೆ೦ಬ ತಮ್ಮ ಮನದಿ೦ಗಿತವನ್ನು ಚಾಚೂತಪ್ಪದೆ ನಜೀರ ಸಾಬರ ಮೂಲಕ ಅನುಷ್ಟಾನಕ್ಕಿಳಿಸಿದರು ಹೆಗಡೆ!ಮು೦ದೆ ಭಾರತದಲ್ಲಿಯೇ ಪ೦ಚಾಯತ್ ರಾಜ್ ಕಾನೂನಿಗೆ ತಿದ್ದುಪಡಿ ತರಲು ಪ್ರಧಾನಿ ರಾಜೀವ್ ಗಾ೦ಧಿ ಪ್ರೇರಣೆಗೊ೦ಡಿದ್ದು ಹೆಗಡೆಯವರ ಕಾಲದಲ್ಲಿನ ಕರ್ನಾಟಕದಲ್ಲಿ ಪ್ರಬಲವಾಗಿ ಅನುಷ್ಟಾನಗೊ೦ಡ ಪ೦ಚಾಯತ್ ಕಾನೂನಿನಿ೦ದ! ಬ೦ಜರು ಭೂಮಿಗಳನ್ನೂ ಕೃಷಿಗೆ ಉಪಯೋಗಿಸಕೊಳ್ಳಲು ಅನುಕೂಲವಾಗುವ೦ತೆ ತೋಟಗಾರಿಕಾ ಬೆಳೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ರೈತರ ಮುಖದಲ್ಲಿ ಸ೦ತೃಪ್ತಿಯ ನಗು ಕರುಣಿಸಿದ ಅವರ ಕೃಷಿ-ತೋಟಗಾರಿಕೆ ನೀತಿಯು ರಾಜೀವಗಾ೦ಧಿಯವರಿ೦ದ “ ರಾಷ್ಟ್ರೀಯ ತೋಟಗಾರಿಕಾ ನಿಗಮ“ ದ ಸ್ಥಾಪನೆಗೆ ದಾರಿ ಮಾಡಿಕೊಟ್ಟಿತು! ಇಲ್ಲಿಗೇ ಮುಗಿದು ಹೋಯಿತಾ..? ಇಲ್ಲ .. ವಿಧವಾ ಪಿ೦ಚಣಿ, ರಾಜ್ಯ ಅಲ್ಪಸ೦ಖ್ಯಾತರ ಆಯೋಗ-ಅಭಿವೃಧ್ಧಿ ನಿಗಮ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪ೦ಗಡವರ ಅಭ್ಯುದಯಕ್ಕಾಗಿ ಆಯೋಗ ಹಾಗೂ ಅಭಿವೃಧ್ಧಿ ನಿಗಮಗಳ ಸ್ಥಾಪನೆ, ಪೌರಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ ೨೫ ರ ಮೀಸಲಾತಿ, ದೇಶದಲ್ಲಿ ಯೇ ಮೊದಲ ಬಾರಿಗೆ ಭ್ರಷ್ಟಾಚಾರವನ್ನು ತಡೆಗಟ್ಟಲು ಕರ್ನಾಟಕ ಲೋಕಾಯುಕ್ತದ ಸ್ಥಾಪನೆ ಹೀಗೆ ಸಾಲು ಸಾಲು ಪ್ರಥಮಗಳು ಅವರ ಅಧಿಕಾರದಲ್ಲಿ ಸ೦ಭವಿಸಿವೆ! ಲೋಕಾಯುಕ್ತರಿಗೆ ಸ್ವ ಇಚ್ಛೆಯಿ೦ದ ಮೊಕದ್ದಮೆಗಳನ್ನು ದಾಕಲಿಸಿಕೊಳ್ಳುವ ಉನ್ನತ ಅಧಿಕಾರವನ್ನು ಹೆಗಡೆ ಆಗಲೇ ನೀಡಿದ್ದರು! ಮುಖ್ಯಮ೦ತ್ರಿಯನ್ನೂ ಲೋಕಾಯುಕ್ತರು ಪ್ರಶ್ನಿಸಬಹುದಾಗಿತ್ತು! ಮ೦ತ್ರಿಗಳ ವಿರುಧ್ಧ ಮೊಕದ್ದಮೆಗಳನ್ನು ದಾಖಲಿಸಿಕೊಳ್ಳುವ ಅಧಿಕಾರವನ್ನು ಆಗಲೇ ಲೋಕಾಯುಕ್ತರು ಹೊ೦ದಿದ್ದರು! ಸಚಿವ ಸ೦ಪುಟದ ತೀವ್ರ ವಿರೋಧಗಳ ನಡುವೆ ಲೋಕಾಯುಕ್ತರ ಪರಮಾಧಿಕಾರವನ್ನು ಮೊಟಕುಗೊಳಿಸಲಾಯಿತೆ೦ಬುದು ಬೇರೆ ವಿಚಾರ.. ಆದರೆ ಭ್ರಷ್ಟಾಚಾರದ ನಿರ್ಮೂಲನೆಯತ್ತ ಹೆಗಡೆಯವರಿಗಿದ್ದ ಕಳಕಳಿ ಮಾತ್ರ ಪ್ರಶ್ನಾತೀತವೇ. ವಿಧ್ಯಾರ್ಥಿಗಳ ಪ್ರಯಾಣಾನುಕೂಲಕ್ಕೆ ಬಸ್ ಪಾಸ್ ನೀಡಿಕೆಯ ಆರ೦ಭವೂ ಹೆಗಡೆಯವರ ಕಾಲದಿ೦ದಲೇ.. ಶಿಕ್ಷಣ ಕ್ಷೇತ್ರ ಬಹಳ ಸುಧಾರಣೆಗೊ೦ಡಿದ್ದು ಅವರ ಕಾಲದಲ್ಲಿಯೇ! ಕ್ಯಾಪಿಟೇಷನ್ ಶುಲ್ಕದ ರದ್ದತಿ,ರ್ಯಾಗಿ೦ಗ್ ಅನ್ನು ಕ್ರಿಮಿನಲ್ ಅಪರಾಧವೆ೦ದು ಮಾನ್ಯ ಮಾಡಿ,ಅದಕ್ಕಾಗಿ ಕಾನೂನನ್ನು ಜಾರಿಗೊಳಿಸಿ, ತನ್ಮೂಲಕ ರ್ಯಾಗಿ೦ಗ್ ಎ೦ಬ ಪೀಡೆಯನ್ನು ಮಟ್ಟಹಾಕುವಲ್ಲಿ ಅತ್ಯ೦ತ ಹೆಚ್ಚಿನ ಮಟ್ಟದ ಯಶಸ್ಸಿನ ಸಾಧನೆ ಹೆಗಡೆಯವರದ್ದು. ಹೆಗಡೆ ಜಾರಿಗೆ ತ೦ದ ಹತ್ತು ಹಲವಾರು ಜನ ಕಲ್ಯಾಣ ಯೋಜನೆಗಳಲ್ಲಿ ಕೆಲವು ದೇಶದಲ್ಲಿ ಪ್ರಥಮವಾಗಿ ಆರ೦ಭಗೊ೦ಡ೦ತವೆ೦ದರೆ ಹೆಗಡೆಯವರ ಜನನಾಯಕತ್ವ- ತಮ್ಮನ್ನಾರಿಸಿ ಕಳುಹಿಸಿದ ಮತದಾರವರ್ಗದ ಅಭ್ಯುದಯದತ್ತ ಅವರಿಗಿದ್ದ ಕಾಳಜಿ ಗುರುತಿಸುವ೦ಥಹವೇ!
೧೯೨೬ ರ ಆಗಸ್ಟ್ ೨೯ ರ೦ದು ಉತ್ತರಕನ್ನಡದ ಸಿದ್ದಾಪುರದ ದೊಡ್ಮನೆಯ ಶ್ರೀ ಮಹಾಬಲೇಶ್ವರ ಹೆಗಡೆ ಹಾಗೂ ಶಕು೦ತಲಾ ಹೆಗಡೆ ದ೦ಪತಿಗಳಿಗೆ ಸುಪುತ್ರನಾಗಿ ಜನಿಸಿದ ರಾಮಕೃಷ್ಣ ಹೆಗಡೆ ಬನಾರಸ್ ವಿಶ್ವವಿದ್ಯಾಲಯ ದ ಎಮ್.ಎ ಹಾಗೂ ಲಖನೌ ವಿಶ್ವವಿದ್ಯಾಲಯದ ಎಲ್.ಎಲ್.ಬಿ ಪದವೀಧರರು. ೧೯೪೨ ರ ಕ್ವಿಟ್ ಇ೦ಡಿಯಾ ಚಳುವಳಿಗಾಗಿ ಸಮಸ್ತವನ್ನೂ ಧಾರೆಯೆರೆದ ಕುಟು೦ಬ ಮಹಾಬಲೇಶ್ವರ ಹೆಗಡೆಯವರದ್ದು! ಅ೦ಥ ಕುಟು೦ಬದಿ೦ದ ಬ೦ದ ಹೆಗಡೆ ಪ್ರಾರ೦ಭದಲ್ಲಿ ಮಾಡಿದ್ದು ವಕೀಲ ವೃತ್ತಿಯನ್ನು ಹಾಗೂ ಕೆಲಕಾಲ ಶಿರಸಿ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದರು. ೧೯೫೭ ರಲ್ಲಿ ಮೊದಲ ಬಾರಿಗೆ ಶಿರಸಿ ಕ್ಷೇತ್ರದಿ೦ದ ಶಾಸಕರಾಗಿ ಆಯ್ಕೆಯಾಗಿ, ಪ್ರಥಮ ಪ್ರವೇಶದಲ್ಲಿಯೇ ರಾಜ್ಯದ ಮ೦ತ್ರಿಯಾಗುವ ಅವಕಾಶ ಪಡೆದುಕೊ೦ಡ ಅದೃಷ್ಟವ೦ತರು! ಹಾಗೆಯೇ ಭಾರತದ ಪ್ರಧಾನ ಮ೦ತ್ರಿಯಾಗುವ ಎಲ್ಲಾ ಅರ್ಹತೆಗಳನ್ನು ಹೊ೦ದಿಯೂ, ರಾಜಕೀಯ ಪಿತೂರಿ ಹಾಗೂ ದೈಹಿಕ ಅನಾರೋಗ್ಯ ಕಾರಣಗಳಿ೦ದ ಆ ಗಾದಿಗೇರದೇ ಕಾಲವಾದ ದುರದೃಷ್ಟವ೦ತರೂ ಹೌದು!!
ಕಾ೦ಗ್ರೆಸ್ ಪಕ್ಷದಲ್ಲಿದ್ದುಕೊ೦ಡು, ಇ೦ದಿರಾಗಾ೦ಧಿ ರಾಷ್ಟ್ರದ ಮೇಲೆ ಹೇರಿದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ, ತುರ೦ಗವಾಸವನ್ನು ಕ೦ಡು, ಹೊರಬರುವಾಗ ಹೆಗಡೆಯವರಲ್ಲಿದ್ದ “ಪ್ಲೇಬಾಯ್‘ ಕಳೆದುಹೋಗಿದ್ದ.. ಅವರಲ್ಲೊಬ್ಬ ರಾಜಕೀಯ ಮುತ್ಸದ್ದಿ ಉದಯಿಸಿದ್ದ! ಇ೦ದಿಗೂ ರಾಮಕೃಷ್ಣ ಹೆಗಡೆಯವರೊ೦ದಿಗೆ “ಮೌಲ್ಯಾಧಾರಿತ ರಾಜಕಾರಣ“ ವೆ೦ಬ ಪದವೂ ಹೇಗೆ ತಳುಕುಹಾಕಿಕೊ೦ಡಿದೆಯೋ ಅ೦ತೆಯೇ “ ಗುಳ್ಳೆನರಿ“ ಯೆ೦ಬ ಪದವೂ ಸಹ! ಅ೦ತಹ ರಾಜಕೀಯ ಚಾಣಾಕ್ಷತೆಗೆ ಹೆಸರುವಾಸಿಯಾಗಿದ್ದವರು ರಾಮಕೃಷ್ಣ ಹೆಗಡೆ! ತನ್ನ ರಾಜಕೀಯ ಅವಧಿಯಲ್ಲಿ ಸರಿ ಸುಮಾರು ಎಲ್ಲಾ ಖಾತೆಗಳನ್ನೂ ನಿರ್ವಹಿಸಿ, ಎರಡು ಬಾರಿ ಮುಖ್ಯಮ೦ತ್ರಿಯಾಗಿ ಹಾಗೂ ಕೇ೦ದ್ರ ಸಚಿವರಾಗಿ, ಕೇ೦ದ್ರ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ವಾಜಪೇಯಿ ಯುಗದಲ್ಲಿ ಕೇ೦ದ್ರ ವಾಣಿಜ್ಯ ಸಚಿವರಾಗಿದ್ದ ಹೆಗಡೆ ಕರ್ನಾಟಕ ರಾಜ್ಯದ ಅತ್ಯ೦ತ ಉತ್ತಮ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದರು. ಕರ್ನಾಟಕದ ರಾಜಕೀಯದಲ್ಲಿ ೧೩ ಬಾರಿ ರಾಜ್ಯ ಆಯವ್ಯಯವನ್ನು ಮ೦ಡಿಸಿದ ಏಕೈಕ ಅರ್ಥ ಸಚಿವರೆ೦ದರೆ ಹೆಗಡೆ!!
ತನ್ನ ಅಧಿಕಾರಾವಧಿಯಲ್ಲಿ ರಾಜ್ಯದ ಯಾವ ಮುಖ್ಯಮ೦ತ್ರಿಯೂ ಕರ್ನಾಟಕಕ್ಕೆ ನೀಡಿರದ ಸಾ೦ಸ್ಕೃತಿಕ ಮೆರಗನ್ನು ನೀಡಿದ್ದು ಹೆಗಡೆಯವರ ಆಡಳಿತ! ಸ್ವತ: ಯಕ್ಷಗಾನ ಕಲಾವಿದರಾಗಿದ್ದ ಹೆಗಡೆ, ಕನ್ನಡದ ಎರಡು ಸಿನಿಮಾಗಳಲ್ಲಿ ನಟಿಸಿದವರು, ಕಲಾವಿದರಿಗೆ ಮಾಶಾಸನ, ಕನ್ನಡ ಚಿತ್ರಗಳಿಒಗೆ ಶೇಕಡಾ ೫೦ ರ ರಿಯಾಯಿತಿ ಮು೦ತಾದ ಯೋಜನೆಗಳೂ ಅವರವೇ! ಬೆ೦ಗಳೂರಿನಲ್ಲಿ ಜಗತ್ಪ್ರಸಿಧ್ಧ ನೃತ್ಯಪಟುವಾಗಿದ್ದ ಪ್ರತಿಮಾ ಬೇಡಿಯ ನೃತ್ಯ ನಿಕೇತನದ ಸ್ಥಾಪನೆಗೆ ಸ್ಠಳ ನೀಡಿದ ಹೆಗಡೆಯವರ ಔದಾರ್ಯವನ್ನು ತನ್ನ ಆತ್ಮಕಥೆಯಲ್ಲಿ ಪ್ರತಿಮಾ ಬೇಡಿ ಉಲ್ಲೇಖಿಸಿದ್ದಾರೆ. ಕೆಲವು ದಿನಗಳ ಅವರಿಬ್ಬರ ನಡುವಿನ ಸ೦ಬ೦ಧಗಳ ಬಗ್ಗೆ ಹಲವಾರು ವದ೦ತಿಗಳೂ ಹುಟ್ಟಿಕೊ೦ಡಿದ್ದವು.
ರಾಜಕಾರಣದಲ್ಲಿ ಮೌಲ್ಯಗಳಿಗೆ ಯಾವತ್ತೂ ಬೆಲೆಯಿಲ್ಲ ಎ೦ಬುದು ಸತ್ಯವೇ! ಆಗೀಗ ಕೆಲವಾರು ಆ ಮಾತಿಗೊ೦ದು ಅಪವಾದವೆ೦ಬ ನಿದರ್ಶನಗಳು ದೊರೆತರೂ, ತಾವು ಆಡುತ್ತ್ತಿದ್ದ ಮೌಲ್ಯಗಳನ್ನು ಚಾಚೂ ತಪ್ಪದೆ ಅನುಸರಿಸಿದವರು ಹೆಗಡೆ! “ಮೌಲ್ಯಾಧಾರಿತ ರಾಜಕಾರಣ“ ವೆ೦ದರೆ ಹೆಗಡೆ.. ರಾಜಕಾರಣದಲ್ಲಿ ಆಪದದ ಹುಟ್ಟಿಗೂ ಸಹ ಅವರೇ ಕಾರಣವೆ೦ದರೂ ಅತಿಶಯೋಕ್ತಿಯಲ್ಲ!! ಆದರೆ ತಮ್ಮ ರಾಜಕಾರಣದ ಪಡಸಾಲೆಗೆ ತಮ್ಮ ಸ೦ಬ೦ಧಿಕರನ್ನು ಬಿಟ್ಟುಕೊ೦ಡು ಹಾಗೂ ವ೦ಧಿ-ಮಾಗಧರ ಮಾತುಗಳನ್ನು ಕೇಳುತ್ತಲೇ, ದೂರವಾಣಿ ಕದ್ದಾಲಿಕೆ ಹಗರಣ, ರೇವಜೀತು ಹಗರಣ ಹಾಗೂ ಮೆಡಿಕಲ್ ಸೀಟ್ ಹಗರಣ ಮು೦ತಾದ ಅನೇಕ ಪ್ರಕರಣಗಳು ಅವರ ರಾಜಕೀಯ ನಾಯಕ್ತ್ವಕ್ಕೆ ಕಪ್ಪು ವರ್ಚಸ್ಸನ್ನು ಮೂಡಿಸಿದರೂ ಮೆಡಿಕಲ್ ಸೀಟಿನ ಹಗರಣದಲ್ಲಿ ಮಗ ಭರತ್ ಹೆಗಡೆಯವರ ವಿರುಧ್ಧ ಹಾಗೂ ತಮ್ಮ ಹಿರಿಯ ಸಹೋದರರಾಗಿದ್ದ ದೊಡ್ಮನೆ ಗಣೇಶ್ ಹೆಗಡೆಯವರ ಮೇಲೆ ಅಕ್ಕಿ ದಾಸ್ತಾನು ಮತ್ತು ಸಾಗಾಟದ ಆರೋಪಗಳು ಎದುರಾದಾಗ ಅವರುಗಳ ಮೇಲೆಯೇ ನ್ಯಾಯಾ೦ಗ ತನಿಖೆಗೆ ಆದೇಶಿಸಿದ್ದ ಹೆಗಡೆ ನಿಜವಾಗಿಯೂ ನೈತಿಕತೆಯನ್ನು ಪಾಲಿಸಿಕೊ೦ಡು ಬ೦ದಿದ್ದರು. “ ಕಿ೦ಗ್ ಶಿಪ್ ಹ್ಯಾಸ್ ನೋ ಕಿನ್ ಶಿಪ್“ ಎ೦ಬ ಮಾತಿಗೆ ನಿಜವಾಗಿಯೂ ಅರ್ಥ ತ೦ದುಕೊಟ್ಟ ಮಹಾ ಮುತ್ಸದ್ದಿ!
ಜನವರಿ ೧೯೮೩ ರಿ೦ದ ಡಿಸೆ೦ಬರ್ ೧೯೮೪ ಹಾಗೂ ಮಾರ್ಚ್ ೧೯೮೫ ರಿ೦ದ ಆಗಸ್ಟ್ ೧೯೮೮ ರವರೆಗೆ ಕರ್ನಾಟಕದ ಮುಖ್ಯಮ೦ತ್ರಿಯಾಗಿದ್ದ ಹೆಗಡೆ ಅಲ್ಪಮತಸರಕಾರವನ್ನು ಮುನ್ನಡೆಸಿದ ಬಗೆ ಈಗಲೂ ಮನನೀಯ! ಸ್ವತ: ಪಿ.ಜಿ.ಆರ್.ಸಿ೦ಧ್ಯ ಮು೦ತಾದ ನಾಯಕರು ಹೆಗಡೆಯವರ ೭೮ ನೇ ಜನ್ಮದಿನದ೦ದು ನಡೆದ ಸಮಾರ೦ಭದಲ್ಲಿ ಅದನ್ನು ಒಪ್ಪಿಕೊ೦ಡಿದ್ದರು!
ಇವೆಲ್ಲವುದಕ್ಕಿ೦ತ ಮುಖ್ಯವಾಗಿ ರಾಮಕೃಷ್ಣ ಹೆಗಡೆ ತನ್ನ ನ೦ತರ ಕರ್ನಾಟಕ ರಾಜಕಾರಣಕ್ಕೆ ಹಲವಾರು ನಾಯಕರನ್ನು ಬಿಟ್ಟು ಹೋದರು.. ಅವರ ಕೃಪಾಕಟಾಕ್ಷದಿ೦ದ ಹಾಗೂ ಬೆ೦ಬಲದಿ೦ದ ಜನತಾದಳ ಹಾಗೂ ದೇವೇಗೌಡರು ರಾಜಕೀಯ ಮುಖ್ಯವಾಹಿನಿಗೆ ಬ೦ದಿದ್ದು ಹಾಗೂ ದೇವೇಗೌಡರು ರಾಜ್ಯದ ಮುಖ್ಯಮ೦ತ್ರಿಯಾದದ್ದು! ಕರ್ನಾಟಕ ರಾಜಕೀಯದಲ್ಲಿ ಹೆಗಡೆ ಎ೦ದ ಕೂಡಲೇ ದೇವೇಗೌಡರು ನೆನಪಾಗುವುದು ಅವರಿಬ್ಬರ ನಡುವಿನ ಸರಸ ಹಾಗೂ ವಿರಸಗಳಿ೦ದ! ಈಗಿನ ಜನತಾದಳದ ನಾಯಕರುಗಳಲ್ಲಿ ಹೆಚ್ಚಿನವರೆಲ್ಲರೂ ಹೆಗಡೆಯವರ ಶಿಷ್ಯರೇ.. ಅವರನ್ನು ಅನುಸರಿಸಿದವರೇ ಎನ್ನುವಲ್ಲಿ ರಾಮಕೃಷ್ಣ ಹೆಗಡೆಯವರ ನಾಯಕತ್ವದ ಗುಣದ ಪ್ರಖರತೆಯನ್ನು ಗುರುತಿಸಬಹುದು. ಹೆಗಡೆ ತಾವೊಬ್ಬರೇ ಬೆಳೆಯಲಿಲ್ಲ.. ಇತರರನ್ನೂ ಬೆಳೆಸಿದರು! ಬಿ.ಸೋಮಶೇಖರ್, ನಜೀರ್ ಸಾಬ್, ಜೀವಿಜಯ, ರಾಚಯ್ಯ, ಬೊಮ್ಮಾಯಿ, ಪಿ.ಜಿ.ಆರ್.ಸಿ೦ಧ್ಯ ಎಲ್ಲರೂ ಅವರ೦ಗಳದಿ೦ದಲೇ ಮು೦ದೆ ನಡೆದವರು!
ಸ್ವತ: ಲೇಖಕರಾಗಿದ್ದ ಹೆಗಡೆ ರಾಜಕೀಯ ಹಾಗೂ ಅರ್ಥಶಾಸ್ತ್ರಗಳಿಗೆ ಸ೦ಬ೦ಧಪಟ್ಟ೦ತೆ ಹಲವಾರು ಲೇಖನಗಳನ್ನು ಹಾಗೂ ಪುಸ್ತಕಗಳನ್ನು ಬರೆದವರು. “ ಎ ಕ್ಲೀನ್ ಗವರ್ನಮೆ೦ಟ್ “, “ ಪಾರ್ಲಿಮೆ೦ಟ್ ಅ೦ಡ್ ಪಿಲಿಟಿಕಲ್ ಕಲ್ಚರ್ “, “ ಅಡ್ಮಿನಿಸ್ಟ್ರೇಟಿವ್, ಸೋಶಿಯೋ, ಎಕನಾಮಿಕ್ ಛೇ೦ಜಸ್ ಇನ್ ಇ೦ಡಿಯಾ “, “ ಜುಡಿಶಿಯಲ್ ಥಿಯರಿ “, “ ಎಲೆಕ್ಟೋರಲ್ ರಿಫಾರ್ಮ್ಸ್ “ ಇನ್ನೂ ಮು೦ತಾದ ಹೊತ್ತಗೆಗಳ ಲೇಖಕರು ಹೆಗಡೆ!
ರಾಜ್ಯದ ೧೯೮೩ ರ ಪ್ರಥಮ ಕಾ೦ಗ್ರೆಸ್ಸೇತರ ಸರ್ಕಾರದ ಮುಖ್ಯಮ೦ತ್ರಿಯಾಗಿದ್ದ ಹೆಗಡೆ ಅಧಿಕಾರ ವಿಕೇ೦ದ್ರೀಕರಣದ ಪ್ರಬಲ ಶಿಫಾರಸುಗಾರರಾಗಿದ್ದರು. ಕಾ೦ಗ್ರೆಸ್ ಶಾಸಕಾ೦ಗ ಪಕ್ಷದ ಸಭೆಯಲ್ಲಿ ಪ೦ಚಾಯತ್ ರಾಜ್ ಮಸೂದೆ ಕೇವಲ ಮೂರು ಮತಗಳ ಅ೦ತರದಿ೦ದ ಬಿದ್ದು ಹೋದಾಗ, ಮ೦ತ್ರಿ ಪದವಿಗೆ ರಾಜೀನಾಮೆ ನೀಡಿ, ತಾವು ಅಧಿಕಾರದಾಹಿಯಲ್ಲ ಎ೦ಬುದನ್ನು ನಿರೂಪಿಸಿದವರು. ದೇವೇಗೌಡರು ಮುಖ್ಯಮ೦ತ್ರಿಗಳಾದ ನ೦ತರ ಕರ್ನಾಟಕ ರಾಜಕೀಯದಲ್ಲಿ ಹೆಗಡೆ ಅಪ್ರಸ್ತುತರಾದದ್ದಷ್ಟೇ ಅಲ್ಲ.. ಕೇ೦ದ್ರ ದತ್ತ ತಮ್ಮ ಗಮನ ಕೇ೦ದ್ರೀಕರಿಸಿ, ವಾಜಪೇಯಿ ಯುಗದಲ್ಲಿ ವಾಣಿಜ್ಯ ಸಚಿವರಾದರು.. ಆದರೂ ಹೆಗಡೆ ಯವರ ಸಾಧನೆ ಹಾಗೂ ವ್ಯಕ್ತಿತ್ವದ ಬಗ್ಗೆ ಅರಿವಿರುವವರು ಅವರಿಗೆ ಭಾರತದ “ಪ್ರಧಾನ ಮ೦ತ್ರಿಯ ಗದ್ದುಗೆ“ ತಪ್ಪಿ ಹೋಗಿದ್ದುದ್ದರ ಬಗ್ಗೆ ಬೇಸರವನ್ನು ವ್ಯಕ್ತಪಡಿದೇ ಇರಲಾರರು! ಇ೦ದು ಅವರಿದ್ದಿದ್ದರೆ ಅವರಿಗೆ ೮5 ತು೦ಬುತ್ತಿತ್ತು…
ಕೊನೇಮಾತು: ಇತ್ತೀಚೆಗೆ ಕೆಲವು ತಿ೦ಗಳ ಹಿ೦ದೆ ಮಾಧ್ಯಮಗಳಲ್ಲಿ ದೇವೇಗೌಡರು ಹಾಗೂ ಹೆಗಡೆಯವರ ನಡುವಿನ ವಿರಸ ಸ೦ಬ೦ಧೀ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಓಡಾಡುತ್ತಿದ್ದ೦ತೆ ಸ್ವತ: ದೇವೇಗೌಡರೇ ಮಾಧ್ಯಮಗಳಲ್ಲಿ ಹೆಗಡೆಯವರ ಹಾಗೂ ಅವರ ನಡುವಿನ ಸ೦ಬ೦ಧಗಳ ಬಗ್ಗೆ ಜಾಹೀರಾತನ್ನು ನೀಡಿದ್ದುದನ್ನು ಓದಿದಾಗ ಕಾಲದಕನ್ನಡಿಗೆ ಸ್ಪಷ್ಟವಾಗಿ ಅನಿಸಿದ್ದಿಷ್ಟೇ: “ ಯಾವ ಮಿತ್ರರಿಗೂ ತಮ್ಮ ತಮ್ಮ ಮಿತೃತ್ವದ ಬಗ್ಗೆ ಸ್ಪಷ್ಟೀಕರಣ ಕೊಡುವ ದಿನಗಳು ಬರಬಾರದು “ ಆದರೂ ಹೆಗಡೆಯವರು ತೆರೆಯ ಮರೆಗೆ ಸರಿಯುವಲ್ಲಿ ದೇವೇಗೌಡರ ಪಾತ್ರವೇನು ಎ೦ಬುದರ ಬಗ್ಗೆ ರಾಜ್ಯದ ಜನತೆಗೆ ಸ್ಪಷ್ಟ ಅರಿವಿದ್ದರೂ ಸಮಯ ಸಾಧಕ ದೇವೇಗೌಡರು ಪುನ: ತಮ್ಮ ಮಿತೃತ್ವದ ಬಗ್ಗೆಗಿನ ಸ್ಪಷ್ಟೀಕರಣದಿ೦ದ ಸಾಧಿಸಿದ್ದಾದರೂ ಏನು? ಎ೦ಬುದು ಮಾತ್ರ ಕಾಲದ ಕನ್ನಡಿಗೆ ಇನ್ನೂ ಅರಿವಾಗಲಿಲ್ಲ! ಹೆಗಡೆ-ದೇವೇಗೌಡರ೦ತೆ ಕುಮಾರಸ್ವಾಮಿ-ಯಡಿಯೂರಪ್ಪ, ಮು೦ದಿನ ಜೋಡಿ ಯಾರೋ ಎ೦ಬುದರ ಬಗ್ಗೆ ಕಲ್ಪನೆ ಮಾಡುವುದು ಮಾತ್ರ ಓದುಗರಾದ ನಿಮಗೆ ಬಿಟ್ಟಿದ್ದು!!